ದಿಲ್ಲಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಉತ್ತರಾಖಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ರೊಸ್ಮಿತಾ | PC : Instagram
ಹೊಸದಿಲ್ಲಿ: ಐದು ದಿನಗಳ ಹಿಂದೆ ದಿಲ್ಲಿಯಿಂದ ನಾಪತ್ತೆಯಾಗಿದ್ದ ಅಸ್ಸಾಂನ ವಿದ್ಯಾರ್ಥಿನಿ ಉತ್ತರಾಖಂಡದಲ್ಲಿ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ನಿವಾಸಿ ರೊಸ್ಮಿತಾ ಹೊಜೈ ರೈಲ್ವೇ ನೇಮಕಾತಿ ಮಂಡಳಿಯ ಪರೀಕ್ಷೆ ಬರೆಯುವುದಕ್ಕಾಗಿ ದಿಲ್ಲಿಗೆ ಬಂದಿದ್ದರು. ಅವರು ಜೂನ್ 5ರಿಂದ ನಾಪತ್ತೆಯಾಗಿದ್ದರು.
ಪರೀಕ್ಷೆ ಬರೆದ ಬಳಿಕ, ಜೂನ್ 6ರಂದು ರೊಸ್ಮಿತಾ ಇಬ್ಬರು ಸ್ನೇಹಿತರೊಂದಿಗೆ ಉತ್ತರಾಖಂಡದ ಋಷಿಕೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಅವರು ಶಿವಪುರಿಯಲ್ಲಿ ಕ್ಯಾಂಪಿಂಗ್ ನಡೆಸಲು ನಿರ್ಧರಿಸಿದ್ದರು. ಆದರೆ ಜೂನ್ 6ರ ಸಂಜೆ, ರೊಸ್ಮಿತಾ ನಾಪತ್ತೆಯಾಗಿದ್ದಾರೆ ಎಂಬುದಾಗಿ ಅವರ ಇಬ್ಬರು ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಶಿಬಿರದ ಸಮೀಪದ ನದಿಯಲ್ಲಿ ಯುವತಿಯೋರ್ವಳು ಮುಳುಗುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಆ ಬಳಿಕ ಕಾರ್ಯಾಚರಣೆ ನಡೆಸಿದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮುಳುಗು ತಜ್ಞರು ನದಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ.