ಉತ್ತರಾಖಂಡದಲ್ಲಿ ಅತ್ಯಧಿಕ ಹೆಲಿಕಾಪ್ಟರ್ ಪತನ, ಮೃತ್ಯು ಪ್ರಕರಣ: ವರದಿ

PC : PTI
ಡೆಹ್ರಾಡೂನ್, ಆ. 1: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತಗಳು ಮತ್ತು ಅವುಗಳಲ್ಲಿ ಸಂಭವಿಸಿದ ಸಾವುಗಳ ಪೈಕಿ ಹೆಚ್ಚಿನವು ಉತ್ತಾರಾಖಂಡವೊಂದರಲ್ಲೆ ನಡೆದಿವೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಶುಕ್ರವಾರ ಅಧಿಕೃತ ಅಂಕಿಸಂಖ್ಯೆಗಳನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.
ರಾಜ್ಯದ ಚಾರ್ ಧಾಮ್ ಯಾತ್ರಾ ಮಾರ್ಗದಲ್ಲಿ ಹೆಲಿಕಾಪ್ಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತನಗೊಳ್ಳುತ್ತಿವೆ ಮತ್ತು ತುರ್ತು ಭೂಸ್ಪರ್ಶ ನಡೆಸುತ್ತಿವೆ. ಈ ವರ್ಷದ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಈ ಮಾರ್ಗದಲ್ಲಿ ಐದು ಹೆಲಿಕಾಪ್ಟರ್ಗಳು ಪತನಗೊಂಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಹೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ನಾಗರಿಕ ವಾಯುಯಾನ ಖಾತೆ ಸಹಾಯಕ ಸಚಿವ ಮುರಳೀಧರ್ ಮೊಹೊಲ್ ರಾಜ್ಯಸಭೆಗೆ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಕಳೆದ ಐದು ವರ್ಷಗಳಲ್ಲಿ, ಭಾರತದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತಗಳು ಮತ್ತು ಅವುಗಳಿಂದಾಗಿ ಸಂಭವಿಸಿದ ಸಾವುಗಳ ಸುಮಾರು ಮೂರನೇ ಎರಡರಷ್ಟು ಭಾಗ ಉತ್ತರಖಂಡವೊಂದರಲ್ಲೇ ಸಂಭವಿಸಿದೆ. ದೇಶಾದ್ಯಂತ ಸಂಭವಿಸಿದ 12 ಪ್ರಮುಖ ಹೆಲಿಕಾಪ್ಟರ್ ಅಪಘಾತಗಳ ಪೈಕಿ ಏಳು ಉತ್ತರಾಖಂಡವೊಂದರಲ್ಲೇ ಸಂಭವಿಸಿದೆ. ಈ ಅಪಘಾತಗಳಲ್ಲಿ 30 ಸಾವುಗಳು ಸಂಭವಿಸಿದ್ದು, ಅವುಗಳ ಪೈಕಿ 21 ಉತ್ತರಾಖಂಡದಿಂದ ವರದಿಯಾಗಿವೆ’’ ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡದ ವಾಯು ಸುರಕ್ಷಾ ಮಟ್ಟದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ನೌತಿಯಾಲ್, ಇತರ ಎಲ್ಲದಕ್ಕಿಂತಲೂ ಮಾನವ ಜೀವಗಳಿಗೆ ಹೆಚ್ಚಿನ ಮಹತ್ವ ನೀಡುವಂತೆ ಸರಕಾರಗಳಿಗೆ ಮನವಿ ಮಾಡಿದ್ದಾರೆ.







