ಉತ್ತರಾಖಂಡ | ‘ಜೈ ಶ್ರೀರಾಮ್’ ಹೇಳಲು ನಿರಾಕರಿಸಿದ ವ್ಯಕ್ತಿಗೆ ಹಲ್ಲೆ, ಮೂವರ ಬಂಧನ

ಸಾಂದರ್ಭಿಕ ಚಿತ್ರ
ಡೆಹ್ರಾಡೂನ್,ಆ.18: ಉತ್ತರಾಖಂಡದ ಪೌಡಿ ಗಢ್ವಾಲ್ ಜಿಲ್ಲೆಯಲ್ಲಿ ‘ಜೈ ಶ್ರೀರಾಮ್’ಎಂದು ಹೇಳಲು ನಿರಾಕರಿಸಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಉತ್ತರ ಪ್ರದೇಶದ ಸಹರಾನ್ಪುರ ನಿವಾಸಿ ರಿಜ್ವಾನ್ ಅಹ್ಮದ್ ಸಲ್ಲಿಸಿರುವ ದೂರಿನ ಮೇರೆಗೆ ಪೌಡಿಯ ಶ್ರೀನಗರ ಠಾಣಾ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಸಂಜೆ ಡುಂಗ್ರಿಪಂತ್ ಬಳಿ ತನ್ನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿರುವ ಅಹ್ಮದ್,ತಾನು ಚಹಾದಂಗಡಿಯೊಂದಕ್ಕೆ ಹೋಗಿದ್ದು,ಮದ್ಯಪಾನ ಮಾಡಿದ್ದ ಮೂವರು ವ್ಯಕ್ತಿಗಳು ಅಲ್ಲಿದ್ದರು. ಅವರ ಪೈಕಿ ಮುಕೇಶ್ ಭಟ್ ಎಂಬಾತ ‘ಜೈ ಶ್ರೀರಾಮ್’ ಎಂದು ಹೇಳುವಂತೆ ತನಗೆ ಸೂಚಿಸಿದ್ದ. ತಾನು ನಿರಾಕರಿಸಿದಾಗ ಭಟ್ ಮತ್ತು ಆತನ ಇಬ್ಬರು ಸಹಚರರು ತನ್ನನ್ನು ನಿಂದಿಸಿ,ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ತನ್ನ ಗಡ್ಡವನ್ನು ಹಿಡಿದು ಹಿಂಸಾತ್ಮಕವಾಗಿ ಎಳೆದು ಈ ವ್ಯಕ್ತಿಯ ಗಡ್ಡವನ್ನು ಕತ್ತರಿಸಿ ಎಂದು ಕೂಗಿದ್ದರು. ಅವರು ಹಲ್ಲೆಯ ವೀಡಿಯೊವನ್ನೂ ಮಾಡಿದ್ದರು. ತನ್ನನ್ನು ಭಾರತ ಮಾತಾ ಕಿ ಜೈ ಮತ್ತು ಜೈಶ್ರೀರಾಮ್ ಎಂದು ಕೂಗುವಂತೆ ಬಲವಂತಗೊಳಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ. ತಾನು ಅಂಗಡಿಯ ಹಿಂಭಾಗದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ ಎಂದು ತಿಳಿಸಿದ್ದಾರೆ.
ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆರೋಪಿಗಳು ಅದೇ ದಿನ ಸಹರಾನ್ಪುರದ ಇನ್ನೋರ್ವ ನಿವಾಸಿಗೂ ಬೆದರಿಕೆಯೊಡ್ಡಿ ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದರು ಎಂದೂ ಅಹ್ಮದ್ ಆರೋಪಿಸಿದ್ದಾರೆ.
ನವೀನ್ ಭಂಡಾರಿ ಮತ್ತು ಮನೀಷ್ ಬಿಷ್ಟ ಇತರ ಇಬ್ಬರು ಆರೋಪಿಗಳಾಗಿದ್ದಾರೆ.





