ಉತ್ತರಾಖಂಡ | ದನದ ಕರುವಿನ ರುಂಡ ಪತ್ತೆ ವದಂತಿ; ಗುಂಪಿನಿಂದ ಅಂಗಡಿಗಳ ಧ್ವಂಸ

ಸಾಂದರ್ಭಿಕ ಚಿತ್ರ
ಡೆಹ್ರಾಡೂನ್,ನ.19: ದೇವಾಲಯವೊಂದರ ಪಕ್ಕದಲ್ಲೇ ಇರುವ ಶಾಲೆಯ ಬಳಿ ಸತ್ತ ದನದಕರುವಿನ ರುಂಡ ಪತ್ತೆಯಾಗಿದೆ ಎಂಬ ವದಂತಿಗಳು ಹರಿದಾಡಿದ ಬೆನ್ನಲ್ಲೇ ಗುಂಪೊಂದು ಅಂಗಡಿಮುಂಗಟ್ಟುಗಳನ್ನು ಧ್ವಂಸಗೊಳಿಸಿದ ಘಟನೆ ಉತ್ತರಾಖಂಡದ ಹಲ್ದಾವಾನಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಕರುವಿನ ರುಂಡ ಪತ್ತೆಯಾಗಿದೆಯೆಂದು ಕುರಿತಾದ ವೀಡಿಯೊ ಹಾಗೂ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಬಳಿಕ ಬಾನ್ಬುಲ್ ಪುರ ಪ್ರದೇಶದಲ್ಲಿ ಜಮಾವಣೆಗೊಂಡ ಗುಂಪೊಂದು ಹಲವಾರು ಅಂಗಡಿಗಳು ಹಾಗೂ ವಾಹನಗಳನ್ನು ಧ್ವಂಸಗೊಳಿಸಿತು.
ದಾಂಧಲೆಯಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಪ್ರಯೋಗಿಸಿದರು ಹಾಗೂ ಹಿಂಸಾಚಾರ ಉಲ್ಬಣಿಸುವುದನ್ನು ತಡೆಯಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಕರುವಿನ ರುಂಡ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ನಿವಾಸಿ ರವೀಂದ್ರ ಗುಪ್ತಾ ಅವರು ದೂರು ನೀಡಿದ್ದಾರೆ ಹಾಗೂ ಕರುವಿನ ರುಂಡದ ಅವಶೇಷಗಳನ್ನು ಅಪರಾಧ ವಿಧಿವಿಧಾನ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಈ ಬಗ್ಗೆ ಪೊಲೀಸ್ ಅಧೀಕ್ಷಕ (ಅಪರಾಧವಿಭಾಗ) ಜಗದೀಶ್ ಚಂದ್ರ ಅವರು ಹೇಳಿಕೆಯೊಂದನ್ನು ನೀಡಿ ನಾಯಿಯೊಂದು, ಕರುವಿನ ರುಂಡವನ್ನು ಆ ಸ್ಥಳಕ್ಕೆ ಎಳೆದುತಂದಿದೆಯೆಂಬುದು ಸಿಸಿಟಿವಿ ವೀಡಿಯೊ ಪರಿಶೀಲನೆಯಿಂದ ತಿಳಿದುಬಂದಿದೆ.
ದೊಂಬಿ, ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ 40ರಿಂದ 50 ಗುರುತರಿಯದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಮಾಹಿತಿಗೆ ಬಲಿಯಾಗದಂತೆ ಹಾಗೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಅದನ್ನು ದೃಢಪಡಿಸಿಕೊಳ್ಳುವಂತೆ ನೈನಿತಾಲ್ ಪೊಲೀಸರು ಸ್ಥಳೀಯ ನಿವಾಸಿಗಳನ್ನು ಆಗ್ರಹಿಸಿದ್ದಾರೆ.







