ಉತ್ತರಾಖಂಡ| ಕಮರಿಗೆ ಉರುಳಿದ ಬಸ್: 7 ಮಂದಿ ಮೃತ್ಯು, 11 ಜನರಿಗೆ ಗಾಯ

Photo Credit : PTI
ಡೆಹ್ರಾಡೂನ್, ಡಿ. 30: ದ್ವಾರಾಹಾಟ್ನಿಂದ ರಾಮನಗರಕ್ಕೆ ಸಂಚರಿಸುತ್ತಿದ್ದ ಪ್ರಯಾಣಿಕರ ಬಸ್ಸೊಂದು ಮಂಗಳವಾರ ಬೆಳಗ್ಗೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ 100 ಅಡಿ ಆಳದ ಕಮರಿಗೆ ಉರುಳಿ ಬಿದ್ದು ಸಂಭವಿಸಿದ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ಇತರ 11 ಮಂದಿ ಗಂಭೀರ ಗಾಯಗೊಂಡಿದ್ದಾರೆ.
19 ಮಂದಿ ಪ್ರಯಾಣಿಕರಿದ್ದ ಈ ಬಸ್ ಬಿಕಿಯಾಸೈಣ ಪ್ರದೇಶದ ಸಲ್ಪಾನ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡಿತು. ವಿನಾಯಕ್ ಹಾದು ಹೋದ ಬಳಿಕ ಬಸ್ ದುರಂತಕ್ಕೀಡಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸರು ಹಾಗೂ ಸ್ಥಳೀಯಾಡಳಿತ ಸೇರಿದಂತೆ ಪರಿಹಾರ ಮತ್ತು ರಕ್ಷಣಾ ತಂಡಗಳು ಕಡಿದಾದ ಭೂಪ್ರದೇಶವನ್ನು ದಾಟಿ ಘಟನಾ ಸ್ಥಳ ತಲುಪಿವೆ.
‘‘ಬಸ್ ರಸ್ತೆಯಿಂದ ಸ್ಕಿಡ್ ಆಯಿತು ಹಾಗೂ ಕಂದರಕ್ಕೆ ಬಿದ್ದು ಸೆಕೆಂಡ್ಗಳಲ್ಲಿ ಕಾಣೆಯಾಯಿತು. ಬಸ್ ಬಿದ್ದ ಸದ್ದು ಭಯಾನಕವಾಗಿತ್ತು’’ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಅಲ್ಮೋರಾ ಎಸ್ಪಿ ದೇವೇಂದ್ರ ಪಿಂಚಾ ತಿಳಿಸಿದ್ದಾರೆ.





