Uttarakhand | ಹಾವು ಕಡಿತದಿಂದ 50 ದಿನಗಳಲ್ಲಿ 13 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | Photo Credit : freepik
ಡೆಹ್ರಾಡೂನ್, ಜ. 4: ಉತ್ತರಾಖಂಡದಲ್ಲಿ ಕಳೆದ ಸುಮಾರು 50 ದಿನಗಳಲ್ಲಿ ಹಾವು ಕಡಿತದಿಂದ 13 ಮಂದಿ ಸಾವನ್ನಪ್ಪಿದ್ದಾರೆ. 23 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಉತ್ತರಾಖಂಡದ ಅರಣ್ಯ ಇಲಾಖೆ ತಿಳಿಸಿದೆ.
2013ರಿಂದ ರಾಜ್ಯದಲ್ಲಿ ಹಾವು ಕಚ್ಚಿ ಒಟ್ಟು 274 ಮಂದಿ ಸಾವನ್ನಪ್ಪಿದ್ದಾರೆ ಎಂದು ಅದು ತಿಳಿಸಿದೆ.
ಉತ್ತರಾಖಂಡದಲ್ಲಿ ವನ್ಯಜೀವಿಗಳ ದಾಳಿ ಹೆಚ್ಚಾಗಲು ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆ ಹೇಳಿದೆ. ಇತ್ತೀಚಿನ ದತ್ತಾಂಶದ ಪ್ರಕಾರ, ಚಳಿಗಾಲದಲ್ಲಿ ಕರಡಿ ಮತ್ತು ಚಿರತೆಗಳು ಮಾತ್ರವಲ್ಲದೆ ವಿಷಪೂರಿತ ಹಾವುಗಳೂ ಸಕ್ರಿಯವಾಗುತ್ತವೆ.
ಕರಡಿ ಹಾಗೂ ಹಾವು ಸೇರಿದಂತೆ ಹಲವು ವನ್ಯಜೀವಿಗಳಿಗೆ ಚಳಿಗಾಲ ಸಾಂಪ್ರದಾಯಿಕವಾಗಿ ದೀರ್ಘ ನಿದ್ರೆಯ ಕಾಲ ಎಂದು ಉತ್ತರಾಖಂಡದ ಅರಣ್ಯ ಸಚಿವ ಸುಬೋಧ್ ಉನಿಯಾಲ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ಪ್ರಾಣಿಗಳು ಚಳಿಗಾಲದಲ್ಲಿ ಮೂರು ತಿಂಗಳು ಸುಪ್ತ ಸ್ಥಿತಿಯಲ್ಲಿ ಇರುತ್ತವೆ. ಇದರಿಂದ ದಾಳಿಯ ಘಟನೆಗಳು ಕಡಿಮೆಯಾಗುತ್ತವೆ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಅವುಗಳು ಸುಪ್ತಾವಸ್ಥೆಯಲ್ಲಿ ಇಲ್ಲ. ಅವುಗಳ ಚಟುವಟಿಕೆ ಹೆಚ್ಚಾಗಿದೆ. ಅದರಿಂದಾಗಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.







