ಹೊರಗಿನವರಿಂದ ರಾಜ್ಯದಲ್ಲಿ ಕೃಷಿಭೂಮಿ ಖರೀದಿಗೆ ನಿಷೇಧ: ಮಸೂದೆಯನ್ನು ಅಂಗೀಕರಿಸಿದ ಉತ್ತರಾಖಂಡ ವಿಧಾನಸಭೆ

ಸಾಂದರ್ಭಿಕ ಚಿತ್ರ | PC : PTI
ಡೆಹ್ರಾಡೂನ್: ರಾಜ್ಯದ 13 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಹೊರಗಿನ ವ್ಯಕ್ತಿಗಳು ಕೃಷಿ ಮತ್ತು ತೋಟಗಾರಿಕೆ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸಲು ತನ್ನ ಭೂ ಕಾನೂನಿಗೆ ತಿದ್ದುಪಡಿಯನ್ನು ಉತ್ತರಾಖಂಡ ವಿಧಾನಸಭೆಯು ಶುಕ್ರವಾರ ಅಂಗೀಕರಿಸಿದೆ.
ಉತ್ತರಾಖಂಡ(ಉತ್ತರ ಪ್ರದೇಶ ಜಮೀನ್ದಾರಿ ನಿರ್ಮೂಲನ ಮತ್ತು ಭೂ ಸುಧಾರಣಾ ಕಾಯ್ದೆ,1950) ತಿದ್ದುಪಡಿ ಮಸೂದೆಯು ಹರಿದ್ವಾರ ಮತ್ತು ಉಧಮಸಿಂಗ್ ನಗರ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ. ಆದರೂ ಅಲ್ಲಿಯೂ ಸಹ ಭೂಮಿ ಮಾರಾಟಕ್ಕೆ ಜಿಲ್ಲಾಡಳಿತದ ಬದಲು ರಾಜ್ಯ ಸರಕಾರದ ಅನುಮೋದನೆಯು ಅಗತ್ಯವಾಗಿರುತ್ತದೆ.
ತಿದ್ದುಪಡಿಗೊಂಡಿರುವ ಭೂ ಕಾನೂನು ರಾಜ್ಯದಲ್ಲಿಯ ಅನಿವಾಸಿಗಳು ವಸತಿ ಬಳಕೆಗಾಗಿ ಮಾತ್ರ 250 ಚ.ಮೀ.ಗೂ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಖರೀದಿಸಲು ಅವಕಾಶವನ್ನು ಮಂದುವರಿಸಿದೆ. ಆದರೆ ಅವರು ತಾವು ಅಥವಾ ತಮ್ಮ ಕುಟುಂಬ ರಾಜ್ಯದ ಬೇರೆ ಕಡೆಗಳಲ್ಲಿ ವಸತಿ ಭೂಮಿಯನ್ನು ಖರೀದಿಸಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಕೃಷಿಯಂತಹ ಉದ್ದೇಶಗಳಿಗಾಗಿ 12.5 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಯಾರಿಗಾದರೂ ವರ್ಗಾಯಿಸಲು ಅವಕಾಶ ನೀಡಿದ್ದ ಮೂಲ ಕಾಯ್ದೆಯಲ್ಲಿನ ನಿಬಂಧನೆಯನ್ನು ಈ ತಿದ್ದುಪಡಿಯು ತೆಗೆದುಹಾಕಿದೆ.
2018ರಿಂದ ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗಾಗಿ ಒಟ್ಟು 1,883 ಭೂ ಖರೀದಿ ಒಪ್ಪಂದಗಳನ್ನು ಅನುಮೋದಿಸಲಾಗಿದೆ. ಆದರೆ ಈ ಪೈಕಿ 599 ಒಪ್ಪಂದಗಳು ಭೂ ಬಳಕೆ ಉದ್ದೇಶವನ್ನು ಉಲ್ಲಂಘಿಸಿವೆ ಎಂದು ತಿಳಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು, 572 ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಆರಂಭಿಸಲಾಗಿದೆ. 16 ಪ್ರಕರಣಗಳಲ್ಲಿ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, 9.4 ಹೆಕ್ಟೇರ್ ಭೂಮಿಯನ್ನು ರಾಜ್ಯ ಸರಕಾರಕ್ಕೆ ಮರಳಿಸಲಾಗಿದೆ ಎಂದರು.
ದೇವಭೂಮಿಯ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ, ಪರಿಸರ ಮತ್ತು ಆರ್ಥಿಕತೆಯ ನಡುವೆ ಸಮತೋಲನವನ್ನು ಸಾಧಿಸಲು ಹಾಗೂ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಲು ಕಠಿಣ ಭೂ ಕಾನೂನು ಅಗತ್ಯವಾಗಿತ್ತು ಎಂದೂ ಅವರು ಹೇಳಿದರು.







