ಯುಸಿಸಿಯಡಿ ಕ್ರಮವನ್ನು ಎದುರಿಸುತ್ತಿರುವವರು ನಮ್ಮನ್ನು ಸಂಪರ್ಕಿಸಬಹುದು: ಉತ್ತರಾಖಂಡ ಹೈಕೋರ್ಟ್

Photo Credit | newindianexpress
ಡೆಹ್ರಾಡೂನ್: ಜ.27ರಿಂದ ರಾಜ್ಯದಲ್ಲಿ ಜಾರಿಗೊಂಡಿರುವ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯಿಂದಾಗಿ ಪೀಡಿತರು ಅಥವಾ ಅಧಿಕಾರಿಗಳಿಂದ ಸಂಬಂಧಿತ ಕ್ರಮವನ್ನು ಎದುರಿಸುತ್ತಿರುವವರು ನ್ಯಾಯಾಲಯವನ್ನು ಸಂಪರ್ಕಿಸಿದರೆ ಅವರ ಅಹವಾಲನ್ನು ಆಲಿಸಲಾಗುವುದು ಎಂದು ಉತ್ತರಾಖಂಡ ಉಚ್ಚ ನ್ಯಾಯಾಲಯವು ಶುಕ್ರವಾರ ತಿಳಿಸಿದೆ.
2024ರ ಯುಸಿಸಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ಜಿ.ನರೇಂದ್ರ ಮತ್ತು ನ್ಯಾ.ಅಲೋಕ ಮಹ್ರಾ ಅವರ ಪೀಠವು, ‘ಯಾವುದೇ ವ್ಯಕ್ತಿಯು ಯುಸಿಸಿಯಿಂದ ಬಾಧಿತರಾಗಿದ್ದರೆ ಈ ಪೀಠವನ್ನು ಸಂಪರ್ಕಿಸಬಹುದು. ಯಾವುದೇ ಕ್ರಮವನ್ನು ಎದುರಿಸುತ್ತಿದ್ದರೆ ದಯವಿಟ್ಟು ನಮ್ಮ ಬಳಿಗೆ ಬನ್ನಿ’ ಎಂದು ಹೇಳಿತು.
ಉತ್ತರಾಖಂಡದ ಯುಸಿಸಿ ಕಾಯ್ದೆಯು ಎಲ್ಲ ಸ್ಥಳೀಯ ನಿವಾಸಿಗಳು ರಾಜ್ಯದೊಳಗಿನ ಅಥವಾ ಹೊರಗಿನ ತಮ್ಮ ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯವಾಗಿಸಿದೆ. ಇದಕ್ಕೆ ತಪ್ಪಿದರೆ ಮೂರು ತಿಂಗಳುಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ಇಂತಹ ಸಂಬಂಧಗಳ ನೋಂದಾವಣೆಯು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹೇಳಲಾಗಿದೆ,ಆದರೆ ಅವರ ಹಕ್ಕುಗಳನ್ನು ರಕ್ಷಿಸಲು ಪ್ರಸ್ತುತ ಕಾನೂನು ಚೌಕಟ್ಟು ಸುರಕ್ಷತಾ ಕ್ರಮಗಳನ್ನು ಹೊಂದಿದೆ ಎಂದು ಕುಟುಂಬ ಮತ್ತು ಮಹಿಳಾ ಹಕ್ಕುಗಳ ವಕೀಲರು ಬೆಟ್ಟು ಮಾಡಿದ್ದಾರೆ.
ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ಮುಹಮ್ಮದ್ ಮುಕೀಂ ಪರ ವಕೀಲ ಕಪಿಲ ಸಿಬಲ್ ಅವರು, 2024ರ ಏಕರೂಪ ನಾಗರಿಕ ಸಂಹಿತೆ ಕಾಯ್ದೆಗೆ ತಡೆಯನ್ನು ಕೋರಿ ತನ್ನ ವಾದಗಳನ್ನು ಮಂಡಿಸಲು ದಿನಾಂಕವನ್ನು ನಿಗದಿಗೊಳಿಸುವಂತೆ ಪೀಠವನ್ನು ಆಗ್ರಹಿಸಿದರು.
ಸಂವಿಧಾನದ ವಿಧಿ 21 ಮತ್ತು 25ರಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಕಾಯ್ದೆಯು ಉಲ್ಲಂಘಿಸಿದೆ ಎಂದು ಅವರು ಹೇಳಿದರು. 21ನೇ ವಿಧಿಯು ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಿದರೆ 25ನೇ ವಿಧಿಯು ವ್ಯಕ್ತಿಯು ತನ್ನ ಧರ್ಮವನ್ನು ಆಚರಿಸುವ,ಪ್ರಚಾರ ಮಾಡುವ ಮತ್ತು ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ.
ರಾಜ್ಯ ಸರಕಾರಕ್ಕೆ ಯುಸಿಸಿಯನ್ನು ಜಾರಿಗೊಳಿಸಲು ಅಗತ್ಯ ಸಕ್ಷಮತೆಯ ಕೊರತೆಯಿದೆ ಎಂದು ಹೇಳಿದ ಸಿಬಲ್,ರಾಜ್ಯ ಸರಕಾರವು ತನಗೆ ಅಧಿಕಾರವಿಲ್ಲದಿದ್ದರೂ ಯುಸಿಸಿಯಲ್ಲಿ ಲಿವ್-ಇನ್ ಸಂಬಂಧವನ್ನು ಜಾರಿಗೊಳಿಸುತ್ತಿದೆ. ಅದಕ್ಕೆ ಸಕ್ಷಮತೆಯನ್ನು ಅದು ಹೊಂದಿಲ್ಲ,ಏಕೆಂದರೆ ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿನ ನಮೂದು 5 ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಶಾಸನವನ್ನು ಅಂಗೀಕರಿಸಲು ಮಾತ್ರ ಅದಕ್ಕೆ ಅವಕಾಶ ನೀಡಿದೆ ಎಂದರು.
ಲಿವ್-ಇನ್ ಸಂಬಂಧಗಳು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿಲ್ಲ. ಇದು ಪಟ್ಟಿ 1ರ ನಮೂದು 97ರಡಿ ಕೇವಲ ಸಂಸತ್ತಿನ ವ್ಯಾಪ್ತಿಗೊಳಪಟ್ಟಿದೆ ಎಂದರು.
ತಾನೀಗಾಗಲೇ ಯುಸಿಸಿ ವಿರುದ್ಧ ಇತರ ಎರಡು ಅರ್ಜಿಗಳ ಕುರಿತು ರಾಜ್ಯ ಸರಕಾರಕ್ಕೆ ನೋಟಿಸ್ಗಳನ್ನು ಹೊರಡಿಸಿದ್ದೇನೆ ಎಂದು ಸಿಬಲ್ಗೆ ತಿಳಿಸಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಎ.1ಕ್ಕೆ ನಿಗದಿಗೊಳಿಸಿತು.
ಆದರೂ,ಸಿಬಲ್ ಈ ನಡುವೆ ಅರ್ಜಿದಾರರು ಸೇರಿದಂತೆ ಯುಸಿಸಿಯಿಂದ ಪೀಡಿತರಾದವರು ದಂಡದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ನಾಗೇಂದ್ರ ಅವರು, ಅಂತಹ ವ್ಯಕ್ತಿಗಳು ಈ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಅವರ ಅಹವಾಲುಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
ಲಿವ್-ಇನ್ ಸಂಬಂಧಗಳನ್ನು ನಿಯಮಬದ್ಧಗೊಳಿಸುವುದರಲ್ಲಿ ತಪ್ಪೇನಿದೆ ಎಂದು ಗುರುವಾರ ಅಲ್ಮಾಸುದ್ದೀನ್ ಸಿದ್ದೀಕಿ ಮತ್ತು ಇಕ್ರಂ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಪ್ರಶ್ನಿಸಿತ್ತು. ಯುಸಿಸಿ ಮುಸ್ಲಿಮರು ಮತ್ತು ಇತರ ನಾಗರಿಕರ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸಿದೆ ಹಾಗೂ ಮುಸ್ಲಿಮ್ ಸಮುದಾಯದ ಅಗತ್ಯ ಧಾರ್ಮಿಕ ಆಚರಣೆಯನ್ನು ಉಲ್ಲಂಘಿಸಿದೆ ಎಂದು ಅವರು ತಮ್ಮ ಅರ್ಜಿಗಳಲ್ಲಿ ಆರೋಪಿಸಿದ್ದಾರೆ.
ಯುಸಿಸಿ ವಿರುದ್ಧ ಇನ್ನೂ ಎರಡು ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿವೆ.







