ನೈನಿತಾಲ್ ನಲ್ಲಿ ಕೋಮು ಹಿಂಸಾಚಾರ; ಅತ್ಯಾಚಾರ ಆರೋಪಿಯ ಮನೆ ಕೆಡವಲು ಪುರಸಭೆ ನೋಟಿಸ್ | ಆಕ್ರೋಶ ವ್ಯಕ್ತಪಡಿಸಿದ ಉತ್ತರಾಖಂಡ ಹೈಕೋರ್ಟ್

ಉತ್ತರಾಖಂಡ ಹೈಕೋರ್ಟ್ | PTI
ಹೊಸದಿಲ್ಲಿ : ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ ನಂತರ ನೈನಿತಾಲ್ ನಲ್ಲಿ ಗುರುವಾರ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಉತ್ತರಾಖಂಡ ಹೈಕೋರ್ಟ್ ಶುಕ್ರವಾರ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಆರೋಪಿಯ ಮನೆ ಕೆಡವಲು ನೋಟಿಸ್ ಜಾರಿ ಮಾಡಿದ ಸ್ಥಳೀಯ ಪುರಸಭೆಯ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ರವೀಂದ್ರ ಮೈಥಾನಿ ಅವರಿದ್ದ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸ್ಥಳೀಯ ಪುರಸಭೆಯು ತನ್ನ ಮನೆ ಕೆಡವಲು ನೀಡಿದ ಮೂರು ದಿನಗಳ ನೋಟಿಸ್ ವಿರುದ್ಧ ಆರೋಪಿಯ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ಕುಟುಂಬವು 20 ವರ್ಷಗಳಿಗೂ ಹೆಚ್ಚು ಸಮಯದಿಂದ ಆ ಮನೆಯಲ್ಲಿ ವಾಸವಾಗಿದೆ. ಅವರಿಗೆ ಈ ಮೊದಲು ಯಾವುದೇ ಅತಿಕ್ರಮಣ ಕುರಿತ ನೋಟಿಸ್ ಬಂದಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿತು.
ಪುರಸಭೆಯ ಈ ಕ್ರಮವು, ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಕೆಡಹುವುದನ್ನು
ತಡೆಯಲು ಸುಪ್ರೀಂ ಕೋರ್ಟ್ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ.
"ಈ ಪ್ರಕರಣದ ಕುರಿತು ನಾವು ನ್ಯಾಯಾಂಗ ನಿಂದನೆ ಹೊರಡಿಸುತ್ತಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನೀವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದೀರಿ. ಸುಪ್ರೀಂ ಆದೇಶವು ಬಹಳ ಹಿಂದೆಯೇನೂ ಬಂದಿಲ್ಲ. ಮನೆಯನ್ನು ಕೆಡಹುದಾದರೆ ಅದಕ್ಕೆ ಕಾರ್ಯಸೂಚಿ ಏನು? ಎಂದು ಸುಪ್ರೀಂ ಕೋರ್ಟ್", ಎಂದು ಪೀಠವು ಹೇಳಿತು.
ನೈನಿತಾಲ್ನಲ್ಲಿ ಗುರುವಾರ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿತು.
"ನಿಮ್ಮ ಅಸಮರ್ಥತೆಯು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದೆಲ್ಲವನ್ನೂ ನೀವು ಮುಚ್ಚಿಹಾಕಲು ಬಯಸುತ್ತೀರಿ. ಬಿಮ್ಲಾ ದೇವಿ ಸೇರಿದಂತೆ ಹಲವಾರು ಅಂಗಡಿಯನ್ನು ಏಕೆ ಲೂಟಿ ಮಾಡಲಾಯಿತು?" , ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಅವರ ವಕೀಲರೊಂದಿಗೆ ವಾದ ಮಂಡಿಸಿದಂತೆ ಗಲಾಟೆ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಇದಕ್ಕೆ ನ್ಯಾಯಾಲಯವು, "ಯಾರನ್ನಾದರೂ ಪ್ರತಿನಿಧಿಸದಂತೆ ವಕೀಲರು ಹೇಗೆ ತಡೆಯಬಹುದು..." ಎಂದು ಅಚ್ಚರಿ ವ್ಯಕ್ತಪಡಿಸಿತು.
ರಾಜ್ಯ ಸರಕಾರವು ಉದ್ದೇಶಪೂರ್ವಕವಾಗಿಯೇ ವಿಫಲವಾಗಿದೆ ಎಂದು ಟೀಕಿಸಿದ ನ್ಯಾಯಾಲಯವು,
"ಪೊಲೀಸರು ಜಾಗರೂಕರಾಗಿದ್ದರೆ ಅದು ಸಂಭವಿಸಲು ಸಾಧ್ಯವಿಲ್ಲ... ಹಿಂಸಾಚಾರದ ವಿರುದ್ಧ ನೀವು ಯಾವ ಕ್ರಮ ತೆಗೆದುಕೊಂಡಿದ್ದೀರಿ" ಎಂದು ಪ್ರಶ್ನಿಸಿತು.
ನ್ಯಾಯಾಲಯದ ಪರಿಶೀಲನೆಯ ನಂತರ, ಪುರಸಭೆಯನ್ನು ಪ್ರತಿನಿಧಿಸುವ ವಕೀಲರು ನೋಟಿಸ್ ಅನ್ನು ಹಿಂಪಡೆಯುವುದಾಗಿ ಹೇಳಿದರು.
ಅರ್ಜಿಯ ಮುಂದಿನ ವಿಚಾರಣೆ ಮೇ 6 ರಂದು ನಿಗದಿಪಡಿಸಲಾಗಿದೆ.
ಕಳೆದ ತಿಂಗಳು ಆರೋಪಿಯು 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬುಧವಾರ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಈ ಘಟನೆಯು ಕೋಮು ಹಿಂಸಾಚಾರಕ್ಕೆ ಕಾರಣವಾಯಿತು. ಈ ಸಮಯದಲ್ಲಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯ ಎಸಗಿದರು.







