ಪತಂಜಲಿ, ರಾಮದೇವ್ ಗೆ ವಿಚಾರಣಾ ನ್ಯಾಯಾಲಯವು ಹೊರಡಿಸಿದ್ದ ಸಮನ್ಸ್ ರದ್ದುಗೊಳಿಸಿದ ಉತ್ತರಾಖಂಡ ಹೈಕೋರ್ಟ್

ಯೋಗಗುರು ರಾಮದೇವ್ | PC : PTI
ಡೆಹ್ರಾಡೂನ್(ಉತ್ತರಾಖಂಡ): ಕೊರೊನಿಲ್ ಸೇರಿದಂತೆ ವಿವಿಧ ಉತ್ಪನ್ನಗಳ ಪ್ರಚಾರಕ್ಕಾಗಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿರುವ ದೂರಿಗೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ, ದಿವ್ಯಾ ಫಾರ್ಮಸಿ ಹಾಗೂ ಅವುಗಳ ಮಾಲಕರಾದ ಯೋಗಗುರು ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ವಿಚಾರಣಾ ನ್ಯಾಯಾಲಯವು ಹೊರಡಿಸಿದ್ದ ಸಮನ್ಸ್ ಅನ್ನು ಉತ್ತರಾಖಂಡ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.
ಜಾಹೀರಾತುಗಳು ಸುಳ್ಳು ಅಥವಾ ದಾರಿ ತಪ್ಪಿಸುವಂತಿವೆ ಎನ್ನುವುದನ್ನು ಸಮರ್ಥಿಸಿಕೊಳ್ಳಲು ದೂರಿನೊಂದಿಗೆ ತಜ್ಞರ ವರದಿಯನ್ನು ಲಗತ್ತಿಸಿಲ್ಲ ಎಂದು ನ್ಯಾ.ವಿವೇಕ ಭಾರ್ತಿ ಶರ್ಮಾ ಅವರು ಜೂ.3ರಂದು ನೀಡಿರುವ ತೀರ್ಪಿನಲ್ಲಿ ಬೆಟ್ಟ ಮಾಡಿದ್ದಾರೆ.
‘ಜಾಹೀರಾತಿನಲ್ಲಿ ಹೇಳಿರುವುದು ಸುಳ್ಳು ಎಂದು ನಿರ್ದಿಷ್ಟವಾಗಿ ತಿಳಿಸದೆ ಜಾಹೀರಾತನ್ನು ಹಿಂದೆಗೆದುಕೊಳ್ಳಬೇಕು ಎಂದು ಅರ್ಜಿದಾರ ಸಂಸ್ಥೆಗೆ ಕೇವಲ ಪತ್ರವನ್ನು ಬರೆಯುವುದು ಅರ್ಜಿದಾರರ ವಿರುದ್ಧ ಮೊಕದ್ದಮೆ ಹೂಡಲು ಕಾರಣವಾಗುವುದಿಲ್ಲ,ಅದೂ ಜಾಹೀರಾತಿನಲ್ಲಿಯ ಮಾಹಿತಿಗಳು ಸುಳ್ಳು ಅಥವಾ ಅದು ದಾರಿ ತಪ್ಪಿಸುವಂತಿದೆ ಎಂಬ ಬಗ್ಗೆ ತಜ್ಞರ ವರದಿಯಿಲ್ಲದಿದ್ದಾಗ’ ಎಂದು ನ್ಯಾಯಾಲಯವು ಹೇಳಿದೆ.
ಔಷಧಿಗಳು ಮತ್ತು ಮಾಂತ್ರಿಕ ಪರಿಹಾರಗಳು(ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ,1954ರಡಿ ಅಪರಾಧಗಳನ್ನು ಹೊರಿಸಲು ಔಷಧಿಯ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಲಾಗಿದೆ ಎಂಬ ನಿರ್ದಿಷ್ಟ ಆರೋಪವಿರಬೇಕಿತ್ತು ಎಂದು ನ್ಯಾಯಾಲಯವು ಹೇಳಿದೆ.
ಜಾಹೀರಾತು ಸುಳ್ಳು ಮತ್ತು ದಾರಿ ತಪ್ಪಿಸುವಂತಿದ್ದು,1954ರ ಕಾಯ್ದೆಯ ಕಲಂ 3,4 ಮತ್ತು 7ರಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂಬ ಯಾವುದೇ ಆರೋಪವಿಲ್ಲದ ಕಾರಣ ವಿಚಾರಣಾ ನ್ಯಾಯಾಲಯವು ವಿಚಾರಣೆ ಎದುರಿಸಲು ಅರ್ಜಿದಾರರಿಗೆ ಸಮನ್ಸ್ ಹೊರಡಿಸುವ ಸಂದರ್ಭವಿರಲಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ಪತಂಜಲಿ,ದಿವ್ಯಾ ಫಾರ್ಮಸಿ,ರಾಮದೇವ ಮತ್ತು ಬಾಲಕೃಷ್ಣ 2022 ಮತ್ತು 2024ರ ನಡುವೆ 20 ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ರಾಜ್ಯ ಸರಕಾರವು ಕಳೆದ ವರ್ಷ ಅವರ ವಿರುದ್ಧ ದೂರು ದಾಖಲಿಸಿತ್ತು.
ದೂರನ್ನು ಅಂಗೀಕರಿಸಿದ್ದ ಹರಿದ್ವಾರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.16,2024ರಂದು ಆರೋಪಿಗಳಿಗೆ ಸಮನ್ಸ್ ಹೊರಡಿಸಿದ್ದರು. ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.







