ಉತ್ತರಾಖಂಡ | ಪತ್ರಕರ್ತನ ಮೃತದೇಹ ನದಿಯಲ್ಲಿ ಪತ್ತೆ

ರಾಜೀವ್ ಪ್ರತಾಪ್ (Photo: @IIMCAA)
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹಿರಿಯ ಪತ್ರಕರ್ತ ರಾಜೀವ್ ಪ್ರತಾಪ್ (36) ಕಾಣೆಯಾದ ಹತ್ತು ದಿನಗಳ ಬಳಿಕ, ಅವರ ಮೃತದೇಹ ರವಿವಾರ ಜೋಶಿಯಾರಾ ಬ್ಯಾರೇಜ್ ಬಳಿ ನದಿಯಲ್ಲಿ ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಕುಟುಂಬದವರು ಬೇರೇನೋ ನಡೆದಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಆದರೆ ಪೊಲೀಸರು ಇದನ್ನು ಅಪಘಾತವೆಂದು ದೂರು ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 19ರಂದು ಪ್ರತಾಪ್ ಅವರ ಆಲ್ಟೊ ಕಾರು ಭಾಗೀರಥಿ ನದಿಯಲ್ಲಿ ಪತ್ತೆಯಾಗಿತ್ತು. “ಮೃತದೇಹವು ನದಿಯಲ್ಲಿ ಕೊಚ್ಚಿಹೋಗಿ, ಜೋಶಿಯಾರಾ ಬ್ಯಾರೇಜ್ ಬಳಿ ಪತ್ತೆಯಾಯಿತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ಕಾರಿನಲ್ಲಿ ಒಬ್ಬರೇ ಇದ್ದರು. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿದೆ,” ಎಂದು ಪೊಲೀಸ್ ವರಿಷ್ಠಾಧಿಕಾರಿ ಸರಿತಾ ದೋಭಾಲ್ ತಿಳಿಸಿದ್ದಾರೆ.
ಪ್ರತಾಪ್ ಅವರ ಪತ್ನಿ ಮುಸ್ಕಾನ್, ಈ ಘಟನೆ ಅಕ್ರಮಗಳ ಕುರಿತ ವರದಿ ಮಾಡಿದ್ದರ ಪರಿಣಾಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಆಸ್ಪತ್ರೆ ಮತ್ತು ಶಾಲೆಗಳ ಕುರಿತ ವರದಿ ಯೂಟ್ಯೂಬ್ ಚಾನೆಲ್ 'ದೆಹಲಿ ಉತ್ತರಾಖಂಡ್ ಲೈವ್' ನಲ್ಲಿ ಪ್ರಕಟಿಸಿದ ನಂತರ, ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಕೊನೆಯದಾಗಿ ರಾತ್ರಿ 11 ಗಂಟೆಗೆ ನನ್ನೊಂದಿಗೆ ಮಾತನಾಡಿದ್ದರು. ಆ ನಂತರ ಸಂಪರ್ಕ ಸಾಧ್ಯವಾಗಲಿಲ್ಲ. ಅವರನ್ನು ಅಪಹರಿಸಲಾಗಿದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ,” ಎಂದು ಅವರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 18ರ ರಾತ್ರಿ 11.20ರ ಸುಮಾರಿಗೆ ಪ್ರತಾಪ್ ಅವರು ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಒಬ್ಬರೇ ಕುಳಿತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮರುದಿನ ಗಂಗೋರಿ ಬಳಿ ಕಾರು ನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಯಿತು. SDRF ಹಾಗೂ ಪೊಲೀಸರು ಕಾರನ್ನು ಹೊರತೆಗೆದಾಗ, ಒಳಗೆ ಒಂದು ಚಪ್ಪಲಿ ಸಿಕ್ಕಿತ್ತು. ಬಳಿಕ, ಮೃತದೇಹವನ್ನು ಪತ್ತೆಹಚ್ಚಿ, ಕುಟುಂಬದ ಸಹಾಯದಿಂದ ಗುರುತಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಕಾಶಿ ಜಿಲ್ಲಾ ಆಸ್ಪತ್ರೆಯ ಕುರಿತಾಗಿ ಸೆಪ್ಟೆಂಬರ್ 16ರಂದು ಪ್ರಕಟಿಸಿದ ವರದಿ ನಂತರ ಪ್ರತಾಪ್ ಅವರಿಗೆ ಬೆದರಿಕೆಗಳು ಬಂದಿದ್ದವು ಎಂದು ಕುಟುಂಬದ ಸದಸ್ಯರು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದೆ.
ರಾಜೀವ್ ಪ್ರತಾಪ್ ಉತ್ತರಕಾಶಿಯ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಥಳೀಯ ಸಮಸ್ಯೆಗಳನ್ನು ವರದಿ ಮಾಡುತ್ತಿದ್ದರು. ಅವರ ಸಾವಿನ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.







