ಉತ್ತರಾಖಂಡ | ಪಂಚಾಯತ್ ಚುನಾವಣೆಯಲ್ಲಿ ವಿಜಯಿ ಎಂದು ಘೋಷಿತನಿಗಿಂತ ಹೆಚ್ಚು ಮತ ಪಡೆದಿದ್ದ ಸೋತ ಅಭ್ಯರ್ಥಿ!
ಪ್ರತಿಸ್ಪರ್ಧಿಯನ್ನು ವಿಜಯಿ ಎಂದು ಘೋಷಿಸುವಂತೆ ಚುನಾವಣಾಧಿಕಾರಿಗೆ ಆಗ್ರಹಿಸಿದ ʼಗೆದ್ದʼ ಅಭ್ಯರ್ಥಿ

ಸಾಂದರ್ಭಿಕ ಚಿತ್ರ (PTI)
ಚಂಪಾವತ್ : ಉತ್ತರಾಖಂಡದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ವಿಜಯಿ ಎಂಬ ಪ್ರಮಾಣ ಪತ್ರ ಸ್ವೀಕರಿಸಿದ ಅಭ್ಯರ್ಥಿಯೇ, ನನ್ನ ಪ್ರತಿಸ್ಪರ್ಧಿ ನನಗಿಂತ ಹೆಚ್ಚುವರಿ ಮತ ಪಡೆದಿದ್ದು, ಅವರನ್ನು ವಿಜಯಿ ಎಂದು ಘೋಷಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಉತ್ತರಾಖಂಡದ ತಾರ್ಕುಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಈ ಘಟನೆ ನಡೆದಿದೆ. ಈ ಗ್ರಾಮ ಪಂಚಾಯತಿಯು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿನಿಧಿಸುತ್ತಿರುವ ಚಂಪಾವತ್ ವಿಧಾನಸಭಾ ಕ್ಷೇತ್ರದಲ್ಲಿದೆ.
ಈ ಚುನಾವಣೆಯಲ್ಲಿ ವಿಜಯಿ ಎಂದು ಘೋಷಿತವಾಗಿದ್ದ ಕಾಜಲ್ ಬಿಷ್ಟ್ ಎಂಬವರು 103 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅಭ್ಯರ್ಥಿ ಸುಮಿತ್ ಕುಮಾರ್ ಎಂಬುವವರು 106 ಮತಗಳನ್ನು ಪಡೆದಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಕಾಜಲ್ ಬಿಷ್ಟ್, “ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ ಎಂದು ಚುನಾವಣಾಧಿಕಾರಿಗೆ ತಿಳಿಸಿದ್ದೇನೆ. ನಾನು ಪರಾಭವಗೊಂಡಿದ್ದು, ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯು ನನಗಿಂತ ಮೂರು ಮತಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ಹೀಗಾಗಿ, ಅರ್ಹ ವಿಜಯಿಗೆ ಗೆಲುವಿನ ಪ್ರಮಾಣ ಪತ್ರವನ್ನು ವಿತರಿಸಬೇಕು” ಎಂದು ಹೇಳಿದ್ದಾರೆ.
ಈ ವಿಷಯವು ಚುನಾವಣಾಧಿಕಾರಿ ಹಂತದಲ್ಲಿ ಬಗೆಹರಿಯದೆ ಇದ್ದಾಗ, ಕಾಜಲ್ ಬಿಷ್ಟ್ ಅವರು ಉಪ ವಿಭಾಗಾಧಿಕಾರಿ ಅನುರಾಗ್ ಆರ್ಯರ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಉಪ ವಿಭಾಗಾಧಿಕಾರಿಗಳು, ಇನ್ನು 30 ದಿನಗಳೊಳಗೆ ಮತಗಳ ಮರು ಎಣಿಕೆ ನಡೆಸುವಂತೆ ಚುನಾವಣಾಧಿಕಾರಿಗೆ ಸೂಚಿಸಿದ್ದಾರೆ. ಮತಗಳ ಮರು ಎಣಿಕೆಯ ದಿನಾಂಕವನ್ನು ಆದಷ್ಟೂ ಶೀಘ್ರವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







