ಉತ್ತರಕಾಶಿ: ಮಸೀದಿ ವಿರುದ್ಧ ಪ್ರತಿಭಟನೆ, 150-200 ಜನರ ವಿರುದ್ಧ ಎಫ್ಐಆರ್

PC : Uttarkashi Police/ X
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿನ ಮಸೀದಿಯು ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿ ಗುರುವಾರ ಬಲಪಂಥೀಯ ಗುಂಪುಗಳು ನಡೆಸಿದ್ದ ರ್ಯಾಲಿಗೆ ಸಂಬಂಧಿಸಿದಂತೆ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಮತ್ತು ಕೊಲೆ ಯತ್ನ ಸೇರಿದಂತೆ ಹಲವಾರು ಆರೋಪಗಳಲ್ಲಿ 150-200 ಜನರ ವಿರುದ್ಧ ಪೋಲಿಸರು ಎಫ್ಐಆರ್ ದಾಖಲಿಸಿದ್ದಾರೆ. ರ್ಯಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮ ಪೋಲಿಸ್ ಸಿಬ್ಬಂದಿಗಳು ಮತ್ತು ಇತರ ಹಲವರು ಗಾಯಗೊಂಡಿದ್ದರು.
ಉತ್ತರಕಾಶಿ ಕೊತ್ವಾಲಿ ಇನ್ಸ್ಪೆಕ್ಟರ್ ಅಮರಜೀತ್ ಸಿಂಗ್ ಅವರ ದೂರಿನ ಮೇರೆಗೆ ಶುಕ್ರವಾರ ದಾಖಲಾದ ಎಫ್ಐಆರ್ನಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿದ,ಕೋಮು ದ್ವೇಷವನ್ನು ಉತ್ತೇಜಿಸಿದ ಆರೋಪಗಳನ್ನು ಹೊರಿಸಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸಿದ್ದವರು ಹಿಂಸಾಚಾರದಲ್ಲಿ ತೊಡಗಿದ್ದು, ಪರಿಣಾಮವಾಗಿ ಏಳು ಪೋಲಿಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಮತ್ತು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದೂ ಎಫ್ಐಆರ್ನಲ್ಲಿ ಆರೋಪಿಸಿಲಾಗಿದೆ.
ಉತ್ತರಕಾಶಿ ಪಟ್ಟಣದಲ್ಲಿಯ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸಂಯುಕ್ತ ಸನಾತನ ಧರ್ಮ ರಕ್ಷಕ ಸಂಘವು ರ್ಯಾಲಿಯನ್ನು ನಡೆಸಿ ಮಸೀದಿಯನ್ನು ಕೆಡವಬೇಕೆಂದು ಆಗ್ರಹಿಸಿತ್ತು. ಆದರೆ ಮಸೀದಿಯನ್ನು ಮುಸ್ಲಿಮ್ ಸದಸ್ಯರ ಹೆಸರಿನಲ್ಲಿ ನೋಂದಾಯಿತ ಜಮೀನಿನಲ್ಲಿ ಕಾನೂನುಬದ್ಧವಾಗಿ ನಿರ್ಮಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಭಟನಾಕಾರರು ಅನುಮತಿ ಪಡೆದಿದ್ದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಾಗಲು ಪ್ರಯತ್ನಿಸಿದ್ದು,ಪೋಲಿಸ್ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಲು ಮುಂದಾದ ಬಳಿಕ ರ್ಯಾಲಿಯು ಹಿಂಸಾರೂಪಕ್ಕೆ ತಿರುಗಿತ್ತು.
ಪ್ರತಿಭಟನಾಕಾರರು ಪೋಲಿಸ್ ಅಧಿಕಾರಿಗಳ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದರು. ಪ್ರಚೋದನಾಕಾರಿ ಭಾಷಣಗಳನ್ನು ಸಹ ಮಾಡಲಾಗಿತ್ತು ಹಾಗೂ ಪೋಲಿಸರು ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಪ್ರತಿಭಟನಾಕಾರರು ರ್ಯಾಲಿಯ ಮಾರ್ಗದಲ್ಲಿದ್ದ ಮುಚ್ಚಲಾಗಿದ್ದ ಅಂಗಡಿಗಳನ್ನೂ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್ಐಆರ್ನಲ್ಲಿ ಜಿತೇಂದ್ರ ಚೌಹಾಣ್, ಸೋನು ನೇಗಿ ಸೇರಿದಂತೆ ಒಂಭತ್ತು ಗುರುತಿಸಲಾದ ಆರೋಪಿಗಳನ್ನು ಮತ್ತು 150ರಿಂದ 200 ಅಪರಿಚಿತ ಆರೋಪಿಗಳನ್ನು ಹೆಸರಿಸಲಾಗಿದೆ.







