ಉತ್ತರಕಾಶಿ ಸುರಂಗ ಕುಸಿತ: 12-15 ಮೀ.ಕೊರೆಯುವುದು ಬಾಕಿಯಿದೆ ಎಂದ ಎನ್ಎಚ್ಎಐ ಸದಸ್ಯ
ಸಿಎಂ ಧಾಮಿಯಿಂದ ಸ್ಥಳ ಪರಿಶೀಲನೆ

Photo: PTI
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ತೆರವುಗೊಳಿಸಲು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಶನಿವಾರ 14ನೇ ದಿನಕ್ಕೆ ಕಾಲಿರಿಸಿದೆ. ಶುಕ್ರವಾರ ರಾತ್ರಿ ಆಗರ್ ಯಂತ್ರದಲ್ಲಿ ಇನ್ನೊಂದು ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಕೊರೆಯುವುದನ್ನು ಮತ್ತೊಮ್ಮೆ ನಿಲ್ಲಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಸದಸ್ಯ ವಿಶಾಲ ಚೌಹಾಣ್ ಅವರು, 47 ಮೀ.ವರೆಗೂ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇನ್ನು ಕೇವಲ 12-15 ಮೀ.ಕೊರೆಯುವುದು ಬಾಕಿಯಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ)ದ ಸದಸ್ಯ ಲೆ.ಹಸನೈನ್ ಅವರು, ಸುರಂಗದಲ್ಲಿ ಸಿಕ್ಕಿಕೊಂಡಿರುವ ಎಲ್ಲ 41 ಕಾರ್ಮಿಕರು ಉಲ್ಲಸಿತರಾಗಿದ್ದಾರೆ. ಅವರಿಗೆ ಅಗತ್ಯವಿರುವ ಪ್ರತಿಯೊಂದನ್ನೂ ಪೂರೈಸಲಾಗುತ್ತಿದೆ. ಸಂವಹನ ಮಾರ್ಗವೂ ಸಹಜ ಸ್ಥಿತಿಯಲ್ಲಿದೆ. ಹೆಚ್ಚಿನ ಕುಟುಂಬ ಸದಸ್ಯರು ಆಗಮಿಸಿದ್ದು,ಅವರ ನೈತಿಕ ಸ್ಥೈರ್ಯ ಉನ್ನತ ಮಟ್ಟದಲ್ಲಿದೆ ಎಂದು ಹೇಳಿದರು.
ಆಗರ್ ಯಂತ್ರದಿಂದ ಕೊರೆಯುವಿಕೆಯನ್ನು ಮಂದುವರಿಸಲು ಮತ್ತು ಕಾರ್ಮಿಕರು ಸುರಕ್ಷಿತವಾಗಿ ಹೊರಬರುವಂತಾಗಲು ಅವಶೇಷಗಳ ಮೂಲಕ ಉಕ್ಕಿನ ಕೊಳವೆಗಳನ್ನು ಅಳವಡಿಸುವ ಕಾರ್ಯಕ್ಕೆ ಒಂದಲ್ಲೊಂದು ತೊಡಕು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಮಾನವಶ್ರಮದ ಮೂಲಕ ಕೊರೆಯುವ ಆಯ್ಕೆಯನ್ನು ರಕ್ಷಣಾ ತಂಡಗಳು ಪರಿಶೀಲಿಸುತ್ತಿವೆ. ಆದರೆ ಈ ದೈಹಿಕವಾಗಿ ಕೊರೆಯುವ ಕೆಲಸ ತುಂಬ ಸಮಯವನ್ನು ತೆಗೆದುಕೊಳ್ಳುತ್ತದೆ.
ಸುರಂಗದ ಪೈಪ್ಲೈನ್ನಿಂದ ಆಗರ್ ಕೊರೆಯುವ ಯಂತ್ರವನ್ನು ಹೊರಕ್ಕೆ ತಂದ ಬಳಿಕ ಅಂತಿಮ 6ರಿಂದ 9 ಮೀಟರ್ನಲ್ಲಿ ದೈಹಿಕವಾಗಿ ಕೊರೆಯುವ ಕೆಲಸವನ್ನು ಆರಂಭಿಸಬಹುದಾಗಿದೆ ಎಂದು ರಕ್ಷಣಾ ತಂಡದ ಭಾಗವಾಗಿರುವ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಮೂಲಗಳು ತಿಳಿಸಿರುವಂತೆ ಸ್ಥಳದಲ್ಲಿ ಪರಿಸ್ಥಿತಿ ಪ್ರತಿ ಗಂಟೆ ಕಳೆದಾಗಲೂ ಕಠಿಣವಾಗುತ್ತಿದೆ. ಆಗರ್ ಯಂತ್ರದ ಕನಿಷ್ಠ 30 ಮೀ.ಉದ್ದದ ಭಾಗವು ಕೊಳವೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಅದರ ಕೆಲವು ಭಾಗಗಳನ್ನು ದೈಹಿಕವಾಗಿ ಹೊರಕ್ಕೆ ತೆಗೆಯಲಾಗಿದೆ. 800 ಮಿ.ಮೀ.ವ್ಯಾಸದ ಕೊಳವೆಯಿಂದ ಸುಮಾರು 21.5 ಮೀ.ಉದ್ದದ ಆಗರ್ ಡ್ರಿಲ್ ಹೊರತೆಗೆಯಲಾಗಿದೆ. ರಾತ್ರಿಯೊಳಗೆ ಡ್ರಿಲ್ ಅನ್ನು ತೆಗೆಯುವ ಇಡೀ ಕಾರ್ಯಾಚರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದೈಹಿಕವಾಗಿ ಸುರಂಗವನ್ನು ಕೊರೆಯುವ ತಂಡಗಳು ಸ್ಥಳವನ್ನು ತಲುಪಿವೆ. ಇಡೀ ಬ್ಲೇಡನ್ನು ಹೊರತೆಗೆದ ಬಳಿಕ ಕೈಗಳಿಂದ ಕೊರೆಯುವ ಕೆಲಸ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
‘ಆಗರ್ ಯಂತ್ರವು ಮುರಿದಿದೆ. ಅದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ. ನಮ್ಮ ಮುಂದೆ ಈಗ ಹಲವಾರು ಆಯ್ಕೆಗಳಿವೆ ’ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ ತಿಳಿಸಿದರು.
ಈ ನಡುವೆ ಲಂಬವಾಗಿ ಕೊರೆಯುವ ಭಾರೀ ಯಂತ್ರಗಳೂ ಸಿಲ್ಕ್ಯಾರಾ ಸುರಂಗವನ್ನು ತಲುಪಿವೆ.
ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪುನರ್ಪರಿಶೀಲಿಸಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕಲ್ಲುಮಣ್ಣುಗಳ ನಡುವೆ ಕೈಗಳಿಂದ ಕೊರೆಯಲು ಹೈದರಾಬಾದಿನಿಂದ ಪ್ಲಾಸ್ಮಾ ಕಟರ್ ತರಿಸಲಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರವಿವಾರದೊಳಗೆ ಇಡೀ ಯಂತ್ರವನ್ನು ಹೊರಕ್ಕೆ ತರಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.







