ನಾನು ಮದ್ಯ ಸೇವಿಸಿಲ್ಲ, ಏರ್ ಬ್ಯಾಗ್ ಬಿಚ್ಚಿಕೊಂಡಿದ್ದರಿಂದ ರಸ್ತೆ ಕಾಣಿಸಲಿಲ್ಲ: ಕಾರು ಅಪಘಾತವೆಸಗಿದ ಆರೋಪಿಯ ಹೇಳಿಕೆ
ಅಪಘಾತದ ಬಳಿಕ ‘ಮತ್ತೊಂದು ರೌಂಡ್’, ʼಓಂ ನಮಃ ಶಿವಾಯʼ ಎಂದು ಕೂಗಾಡಿದ್ದ ಚಾಲಕ!

ರಕ್ಷಿತ್ ಚೌರಾಸಿಯಾ | PC : X
ವಡೋದರ: “ಕಾರಿನಲ್ಲಿ ಏರ್ ಬ್ಯಾಗ್ ಅಳವಡಿಸಿದ್ದುದರಿಂದ, ನನಗೆ ರಸ್ತೆ ಕಾಣಿಸಲಿಲ್ಲ” ಎಂದು ಗುರುವಾರ ರಾತ್ರಿ ವಡೋದರದಲ್ಲಿ ಅಪಘಾತವೆಸಗಿ, ಓರ್ವ ಮಹಿಳೆಯ ಮೃತ್ಯು ಹಾಗೂ ಹಲವರು ಗಾಯಗೊಳ್ಳಲು ಕಾರಣವಾಗಿದ್ದ 20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ಪೊಲೀಸರಿಗೆ ತಿಳಿಸಿದ್ದಾನೆ.
ಹೋಳಿ ಹಬ್ಬದ ಹಿಂದಿನ ದಿನ ಹೋಳಿ ದಹನಕ್ಕೆ ಸಾಕ್ಷಿಯಾಗಲು ತನ್ನ ಸ್ನೇಹಿತರೊಂದಿಗೆ ತೆರಳಿದ್ದ ಚಾಲಕ ರಕ್ಷಿತ್ ಚೌರಾಸಿಯಾ, ಓರ್ವ ಸ್ನೇಹಿತನನ್ನು ಮನೆಗೆ ಬಿಟ್ಟು, ಮತ್ತೊಬ್ಬ ಸ್ನೇಹಿತನೊಂದಿಗೆ ಮರಳುವಾಗ ಡೇರಾ ವೃತ್ತದ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡಿದ್ದರಿಂದ, ಆತ ಚಲಾಯಿಸುತ್ತಿದ್ದ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಮೂರರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.
“ನಾವು ಸ್ಕೂಟಿಗಿಂತ ಮುಂದೆ ಹೋಗುತ್ತಿದ್ದೆವು. ಕಾರನ್ನು ಬಲಕ್ಕೆ ತಿರುಗಿಸಿದಾಗ, ಅಲ್ಲೊಂದು ರಸ್ತೆ ಗುಂಡಿ ಎದುರಾಯಿತು. ಬಲ ತಿರುವಿನಲ್ಲಿ ಸ್ಕೂಟಿ ಹಾಗೂ ಕಾರೊಂದನ್ನು ನಿಲ್ಲಿಸಲಾಗಿತ್ತು. ನಮ್ಮ ಕಾರು ಸ್ಕೂಟಿಗೆ ತಾಕಿದ್ದರಿಂದ, ಕಾರಿನಲ್ಲಿದ್ದ ಏರ್ ಬ್ಯಾಗ್ ಬಿಚ್ಚಿಕೊಂಡಿತು. ಅದಾದ ನಂತರ, ಕಾರು ಎಲ್ಲಿಗೆ ಹೋಯಿತು ಎಂದು ನನಗೆ ತಿಳಿದಿಲ್ಲ” ಎಂದು ಪೊಲೀಸರ ವಿಚಾರಣೆಯ ವೇಳೆ ರಕ್ಷಿತ್ ಚೌರಾಸಿಯಾ ಹೇಳಿದ್ದಾನೆ. ಇದರೊಂದಿಗೆ, ಅಪಘಾತದ ನಡೆದ ವೇಳೆ ನನ್ನ ಕಾರು 50ರಿಂದ 60 ಕಿಮೀ ವೇಗದಲ್ಲಿ ಮಾತ್ರ ಚಲಿಸುತ್ತಿತ್ತು ಎಂದೂ ತಿಳಿಸಿದ್ದಾನೆ.
ಆತ ಮೊದಲಿಗೆ ನಾನು ಮದ್ಯಪಾನ ಮಾಡಿರಲಿಲ್ಲ ಎಂದು ವಾದಿಸಿದರೂ, ನಂತರ ನಾನು ಭಂಗಿ ಸೇವಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ನಾನು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿರುವ ಆತ, ನನ್ನ ತಪ್ಪಿನಿಂದಾಗಿ ಅಪಘಾತ ಸಂಭವಿಸಿತು ಎಂದೂ ತಪ್ಪೊಪ್ಪಿಕೊಂಡಿದ್ದಾನೆ.
“ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ ಎಂದು ನನಗೆ ತಿಳಿಯಿತು. ಹೀಗಾಗಿ, ನಾನು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಬಯಸುತ್ತೇನೆ. ನನ್ನ ತಪ್ಪಿನಿಂದಾಗಿ ಅಪಘಾತ ಸಂಭವಿಸಿದ್ದು, ಅವರ ಏನೆಲ್ಲ ಬಯಸುತ್ತಾರೊ, ಅದೆಲ್ಲ ಆಗಲಿ” ಎಂದೂ ಆತ ಮನವಿ ಮಾಡಿದ್ದಾನೆ.
ಇದಕ್ಕೂ ಮುನ್ನ, ಗುರುವಾರ ರಾತ್ರಿ ವಡೋದರದ ಕರೈಲಿಬಾಗ್ ಪ್ರದೇಶದಲ್ಲಿನ ಜನನಿಬಿಡ ಕೂಡು ಪ್ರದೇಶದಲ್ಲಿ ಕಾರೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಅಪಘಾತದಲ್ಲಿ ಹೇಮಾಲಿಬೆನ್ ಪಟೇಲ್ ಎಂಬ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತದ ತೀವ್ರತೆಯಿಂದ ಜೈನಿ (12), ನಿಶಾಬೆನ್ (35), ಗುರುತು ಪತ್ತೆಯಾಗದ 10 ವರ್ಷದ ಬಾಲಕಿ ಹಾಗೂ 40 ವರ್ಷದ ಪುರುಷ ಸೇರಿದಂತೆ ಮೂರರಿಂದ ನಾಲ್ಕು ಮಂದಿಗೆ ಗಂಭೀರ ಗಾಯಗಳೂ ಆಗಿದ್ದವು .







