ಸ್ಕ್ರೋಲ್ ನ ವೈಷ್ಣವಿ ರಾಥೋಡ್ ದಾನಿಶ್ ಗೆ ದಾನಿಶ್ ಸಿದ್ದೀಕಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

PC : PTI
ಹೊಸದಿಲ್ಲಿ: ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆ ಕುರಿತ ವರದಿಗಾಗಿ ‘ಪ್ರಿಂಟ್/ಡಿಜಿಟಲ್’ ವಿಭಾಗದಲ್ಲಿ ‘ಸ್ಕ್ರೋಲ್’ನ ವೈಷ್ಣವಿ ರಾಥೋಡ್ ಅವರಿ ರವಿವಾರ 2025ರ ಸಾಲಿನ ದಾನಿಶ್ ಸಿದ್ದೀಕಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ವಿವಾದಾತ್ಮಕ ಯೋಜನೆಯ ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ತಳಮಟ್ಟದ ವರದಿ ಮಾಡಿರುವ ಮೊದಲ ಪತ್ರಕರ್ತೆಯಾಗಿರುವ ರಾಥೋಡ್ ಅವರ ಕೆಲಸದಲ್ಲಿನ ಉತ್ಕೃಷ್ಟತೆ, ಆಳವಾದ ಜ್ಞಾನ ಹಾಗೂ ಪ್ರಸ್ತುತತೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಈ ಯೋಜನೆಯ ವರದಿಗೆ ‘ಸ್ಕ್ರೋಲ್’ನ ಓದುಗರು ಕ್ರೌಡ್ ಫಂಡಿಂಗ್ ಮಾಡಿದ್ದರು.
ಸಮಗ್ರತೆ, ಧೈರ್ಯ, ಸಹಾನುಭೂತಿ ಹಾಗೂ ಸತ್ಯವನ್ನು ಸಾಕಾರಗೊಳಿಸಿದ ಪತ್ರಕರ್ತರಿಗೆ ದಾನಿಶ್ ಸಿದ್ದೀಕಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ದಾನೀಶ್ ಸಿದ್ದೀಕಿ ಅವರು ಪುಲಿಟ್ಜರ್ ಪ್ರಶಸ್ತಿ ಗೌರವಾನ್ವಿತ ಛಾಯಾಚಿತ್ರ ಪತ್ರಕರ್ತರಾಗಿದ್ದರು ಹಾಗೂ ಭಾರತದ ರಾಯ್ಟರ್ ಪಿಕ್ಚರ್ಸ್ ಮಲ್ಟಿಮೀಡಿಯಾ ತಂಡದ ಮುಖ್ಯಸ್ಥರಾಗಿದ್ದರು. ಇವರು ರೊಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು ಸೇರಿದಂತೆ ಏಶ್ಯ, ಪಶ್ಚಿಮ ಏಶ್ಯ ಹಾಗೂ ಯುರೋಪ್ನನ ಹಲವು ಪ್ರಮುಖ ಘಟನೆಗಳನ್ನು ಚಿತ್ರೀಕರಿಸಿದ್ದರು. 2021 ಜುಲೈಯಲ್ಲಿ ಅಪಘಾನಿಸ್ತಾನ ಹಾಗೂ ಪಾಕಿಸ್ತಾನದ ನಡುವಿನ ಗಡಿದಾಟುವಿನ ಸಮೀಪ ಅಪ್ಘಾನ್ ಭದ್ರತಾ ಪಡೆಗಳು ಹಾಗೂ ತಾಲಿಬಾನ್ ಹೋರಾಟಗಾರರ ನಡುವಿನ ಸಂಘರ್ಷವನ್ನು ಚಿತ್ರೀಕರಿಸುತ್ತಿದ್ದಾಗ ಮೃತಪಟ್ಟಿದ್ದರು.







