ʼಟೈಗರ್ ಮ್ಯಾನ್' ಎಂದೇ ಖ್ಯಾತರಾಗಿದ್ದ ವನ್ಯಜೀವಿ ಸಂರಕ್ಷಕ ವಾಲ್ಮೀಕ್ ಥಾಪರ್ ನಿಧನ

ವಾಲ್ಮೀಕ್ ಥಾಪರ್ (Image Credit: Sanctuary Nature Foundation))
ಹೊಸದಿಲ್ಲಿ: ಭಾರತದ ʼಟೈಗರ್ ಮ್ಯಾನ್' ಎಂದೇ ಖ್ಯಾತರಾಗಿದ್ದ ವನ್ಯಜೀವಿ ಸಂರಕ್ಷಕ ವಾಲ್ಮೀಕ್ ಥಾಪರ್ ಅವರು ಶನಿವಾರ ದಿಲ್ಲಿಯ ಕೌಟಿಲ್ಯ ಮಾರ್ಗದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ಗೆ ತುತ್ತಾಗಿದ್ದ ಅವರು, ಹಲವು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3.30ರ ವೇಳೆಗೆ ಲೊಧಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ.
ವಾಲ್ಮೀಕ್ ಥಾಪರ್ ಅವರ ತಂದೆ ರೊಮೇಶ್ ಥಾಪರ್ ಪ್ರಖ್ಯಾತ ಪತ್ರಕರ್ತರಾಗಿದ್ದರು. ಇತಿಹಾಸಕಾರ್ತಿ ರೊಮಿಲಾ ಥಾಪರ್ ಅವರ ಚಿಕ್ಕಮ್ಮನಾಗಿದ್ದು, ಅವರ ಸೋದರ ಸಂಬಂಧಿ ಕರಣ್ ಥಾಪರ್ ಕೂಡಾ ಪತ್ರಕರ್ತರಾಗಿದ್ದಾರೆ.
ರಂಗಭೂಮಿ ಕಲಾವಿದೆ ಹಾಗೂ ನಟ ಶಶಿ ಕಪೂರ್ ಅವರ ಪುತ್ರಿ ಸಂಜನಾ ಕಪೂರ್ ಅವರನ್ನು ವಾಲ್ಮೀಕ್ ಥಾಪರ್ ವಿವಾಹವಾಗಿದ್ದರು. ಈ ದಂಪತಿಗಳಿಗೆ ಓರ್ವ ಪುತ್ರನಿದ್ದಾನೆ.
ಭಾರತೀಯ ಸಂರಕ್ಷಣಾ ವಲಯದಲ್ಲಿ ಪ್ರಖ್ಯಾತ ವ್ಯಕ್ತಿಯಾಗಿದ್ದ ವಾಲ್ಮೀಕ್ ಥಾಪರ್, ಹುಲಿಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವನ್ಯಜೀವಿ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
1988ರಲ್ಲಿ ಸರಕಾರೇತರ ಸಂಸ್ಥೆಯಾದ ರಣತಂಬೋರ್ ಪ್ರತಿಷ್ಠಾನವನ್ನು ಸಹ ಸಂಸ್ಥಾಪನೆ ಮಾಡಿದ್ದ ವಾಲ್ಮೀಕ್ ಥಾಪರ್, ಸಮುದಾಯ ಆಧಾರಿತ ಸಂರಕ್ಷಣೆಯತ್ತ ಗಮನ ಕೇಂದ್ರೀಕರಿಸಿದ್ದರು. ನೈಸರ್ಗಿಕ ಹುಲಿ ವಾಸ್ತವ್ಯಗಳ ಸಂರಕ್ಷಣೆ ಹಾಗೂ ವನ್ಯಜೀವಿ ಕಳ್ಳತನ ವಿರುದ್ಧದ ಕಾನೂನುಗಳ ಪ್ರಬಲ ವಕ್ತಾರರಾಗಿದ್ದ ಅವರು, ವಿಶಿಷ್ಟ ವಲಯಗಳನ್ನು ಮಾನವನ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂದು ಪದೇ ಪದೇ ಆಗ್ರಹಿಸುತ್ತಾ ಬಂದಿದ್ದರು.







