180 ಕಿ.ಮೀ. ವೇಗ ದಾಖಲಿಸಿದ ವಂದೇಭಾರತ್ ಸ್ಲೀಪರ್!

ಹೊಸದಿಲ್ಲಿ: ಕೋಟಾ ಮತ್ತು ನಗ್ದಾ ಸೆಕ್ಷನ್ ನಡುವೆ ವಂದೇಭಾರತ್ ಸ್ಲೀಪರ್ ರೈಲು 180 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ವಾಟರ್ ಟೆಸ್ಟ್ ನಡೆಸಿದ ವಿಡಿಯೊವನ್ನೂ ಶೇರ್ ಮಾಡಿದ್ದಾರೆ.
"ರೈಲ್ವೆ ಸುರಕ್ಷಾ ವಿಭಾಗದ ಆಯುಕ್ತರು ಇಂದು ವಂದೇ ಭಾರತ್ ಸ್ಲೀಪರ್ ಪರೀಕ್ಷಿಸಿದ್ದಾರೆ. ಕೋಟಾ ನಗ್ದಾ ಸೆಕ್ಷನ್ ಗಳ ನಡುವೆ ಇದು 180 ಕಿಲೋಮೀಟರ್ ವೇಗದಲ್ಲಿ ಚಲಿಸಿದೆ. ಈ ಹೊಸ ಪೀಳಿಗೆ ರೈಲು ವಾಟರ್ ಟೆಸ್ಟ್ನಲ್ಲೂ ತಾಂತ್ರಿಕ ವೈಶಿಷ್ಟಗಳನ್ನು ಪ್ರದರ್ಶಿಸಿದೆ" ಎಂದು ವೈಷ್ಣವ್ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.
ರೈಲು 182 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವುದು ಮೊಬೈಲ್ ಸ್ಕ್ರೀನ್ ನಲ್ಲಿ ದಾಖಲಾಗಿದೆ. ಪ್ರತಿ ಬೋಗಿಯಲ್ಲಿ ನೀರು ತುಂಬಿದ ಲೋಟಗಳನ್ನು ಇಟ್ಟು ಪರೀಕ್ಷಿಸಲಾಗಿದ್ದು, ನೀರು ಚೆಲ್ಲದೇ ಇರುವುದು ರೈಲಿನ ಸ್ಥಿರತೆಯನ್ನು ಪ್ರತಿಬಿಂಬಿಸಿದೆ.
ವಂದೇಭಾರತ್ ರೈಲು ಪ್ರಸ್ತುತ ಭಾರತೀಯ ರೈಲ್ವೆ ಜಾಲದಲ್ಲಿ ಸೆಮಿ ಹೈಸ್ಪೀಡ್ ರೈಲುಗಳಾಗಿ ಓಡುತ್ತಿದ್ದು, 180 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. "ರೈಲಿನ ಸರಾಸರಿ ವೇಗ, ರೈಲು ಹಳಿಯ ಭೌಗೋಳಿಕ ಅಂಶಗಳು, ನಿಲುಗಡೆ, ನಿರ್ವಹಣಾ ಕೆಲಸವನ್ನು ಅವಲಂಬಿಸಿದೆ" ಎಂದು ರೈಲ್ವೆ ಸಚಿವಾಲಯದ ಹೇಳಿಕೆ ವಿವರಿಸಿತ್ತು.
"ಮುಂದಿನ ದಿನಗಳಲ್ಲಿ ವಂದೇಭಾರತ್ ಸ್ಲೀಪರ್ ರಾತ್ರಿ ಅವಧಿಯ ಪ್ರಯಾಣವನ್ನೇ ಬದಲಿಸಲಿದೆ; ಅದರ ವೇಗ, ಆರಾಮ ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಇನ್ನು ದೂರದ ಪ್ರಯಾಣಿಕರಿಗೆ ಒದಗಿಸಲಿದೆ" ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.







