ವಂದೇ ಭಾರತ್ ಸ್ಲೀಪರ್ ರೈಲು ಅನಾವರಣ: ವಿಶೇಷತೆಗಳೇನು ಗೊತ್ತೇ?

PC; screengrab/x.com/IndianTechGuide
ಹೊಸದಿಲ್ಲಿ: ಬಹುನಿರೀಕ್ಷಿತ ವಂದೇಭಾರತ್ ಸ್ಲೀಪರ್ ರೈಲು ಕೊನೆಗೂ ಅನಾವರಣಗೊಂಡಿದೆ. ಭಾರತೀಯ ರೈಲ್ವೆಯ ಅತ್ಯಂತ ಜನಪ್ರಿಯ ಚೇರ್ ಕಾರ್ ರೈಲಿನ ಸ್ಲೀಪರ್ ರೂಪಾಂತರದ 10 ರೈಲುಗಳನ್ನು ಬಿಇಎಂಎಲ್ ಈಗಾಗಲೇ ಹಸ್ತಾಂತರಿಸಿದ್ದು, ಈ ಪೈಕಿ ಎರಡು ಶೀಘ್ರವೇ ಚಾಲನೆಗೊಳ್ಳಲಿವೆ. ಮತ್ತೆ 120 ವಂದೇಭಾರತ್ ಸ್ಲೀಪರ್ ರೈಲುಗಳ ನಿರ್ಮಾಣಕ್ಕಾಗಿ ಇಂಡೋ-ರಷ್ಯನ್ ಜಂಟಿ ಸಹಭಾಗಿತ್ವದ ಕಂಪನಿ ಕಿನೆಟ್ ಗೆ ಗುತ್ತಿಗೆ ನೀಡಲಾಗಿದೆ. ಕಿನೆಟ್ ಇತ್ತೀಚೆಗೆ ಫಸ್ಟ್ ಎಸಿ ಕೋಚ್ ನ ವಿನ್ಯಾಸ ಪರಿಕಲ್ಪನೆಯನ್ನು ಅನಾವರಣಗೊಳಿಸಿತ್ತು.
ಇದರ ಪ್ರಕಾರ ರಾಜಧಾನಿ ಎಕ್ಸ್ಪ್ರೆಸ್ ರೈಲಿಗಿಂತಲೂ ಉತ್ಕೃಷ್ಟ ಆರಾಮದಾಯಕ ಸೌಲಭ್ಯಗಳು ಪ್ರಯಾಣಿಕರಿಗೆ ಸಿಗಲಿವೆ. ಈ ರೈಲಿನ ಮೂಲಕ ಭಾರತೀಯ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳು ಹಾಗೂ ಅತಿವೇಗದ ಪ್ರಯಾಣ ಅನುಭವ ಸಿಗಲಿದೆ. ಕುಶನ್ಯ ಯುಕ್ತ ಬರ್ತ್ ಗಳು ಹಾಗೂ ಬಾಟಲಿ ಹೋಲ್ಡರ್, ವಿಶಾಲ ಲಗೇಜ್ ಸ್ಥಳ, ಸ್ಕ್ಯಾಕ್ ಟೇಬಲ್ ನಂತಹ ವೈವಿಧ್ಯಮಯ ಸೌಕರ್ಯಗಳನ್ನು ಒಳಗೊಂಡಿರುತ್ತದೆ.
ಕಂಪಾರ್ಟ್ಮೆಂಟ್ ನಲ್ಲಿ ಮೇಲಿನ ಬರ್ತ್ ಏರಲು ಪ್ರಯಾಣಿಕರಿಗೆ ಹೊಸ ವಿನ್ಯಾಸದ ಮೆಟ್ಟಿಲು ಅಥವಾ ಏಣಿ ಸೌಲಭ್ಯ ಇನ್ನೊಂದು ವಿಶೇಷ ಆಕರ್ಷಣೆಯಾಗಿರುತ್ತದೆ. ಇದರ ಜತೆಗೆ ಬರ್ತ್ ನಲ್ಲಿ ವೈಯಕ್ತಿಕ ಓದುವ ದೀಪ, ಅಚ್ಚುಕಟ್ಟಾದ ದಾಸ್ತಾನು ಜಾಗ ಮತ್ತು ಬಿಲ್ಟ್ ಇನ್ ಯುಎಸ್ ಬಿ ಪೋರ್ಟ್ ಸೌಲಭ್ಯಗಳಿವೆ.
ಕಿನೆಟ್ ಉತ್ಪಾದಿಸುವ ರೈಲುಗಳು ಭಾರತೀಯ ರೈಲ್ವೆಯ ಲಾಥೂರ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಲಿವೆ. ಈ ರೈಲಿಗೆ ಅನುಮತಿಸಲಾದ ವೇಗ ಗಂಟೆಗೆ 160 ಕಿಲೋಮೀಟರ್ ಆಗಿದ್ದು, ಗರಿಷ್ಠ 180 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ವೇಗವರ್ಧನೆ ಮತ್ತು ವೇಗ ಇಳಿಕೆ ಕೂಡಾ ತ್ವರಿತವಾಗಲಿದ್ದು, ಎರಡು ನಗರಗಳ ನಡುವಿನ ಒಟ್ಟಾರೆ ಪ್ರಯಾಣದ ಸಮಯ ಮತ್ತಷ್ಟು ಇಳಿಕೆಯಾಗಲಿದೆ. ಮುಂದಿನ ವರ್ಷಗಳಲ್ಲಿ ಇಂಥ 200 ರೈಲುಗಳನ್ನು ಪ್ರಯಾಣಿಕರ ಸೇವೆಗೆ ಭಾರತೀಯ ರೈಲ್ವೆ ಸಮರ್ಪಿಸಲು ಉದ್ದೇಶಿಸಿದೆ.







