ವಾರಣಾಸಿ | ಭಕ್ತರ ಸುಲಿಗೆ ಆರೋಪ : 21 ನಕಲಿ ಅರ್ಚಕರ ಬಂಧನ

ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯದಲ್ಲಿ ಅರ್ಚಕರಂತೆ ಸೋಗು ಹಾಕಿ ದರ್ಶನ ಹಾಗೂ ಪೂಜೆಯನ್ನು ಸುಗಮಗೊಳಿಸುವ ನೆಪದಲ್ಲಿ ಭಕ್ತರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಂಗಳವಾರ ತಿಳಿಸಿದ್ದಾರೆ.
ದೇವಾಲಯದಲ್ಲಿ ದರ್ಶನ ಹಾಗೂ ಪೂಜೆಗೆ ವ್ಯವ್ಯಸ್ಥೆ ಮಾಡುವುದಾಗಿ ಭಕ್ತರಿಂದ ಹಣ ಸುಲಿಗೆ ಮಾಡುತ್ತಿದ್ದ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಅನಧಿಕೃತ ವ್ಯಕ್ತಿಗಳ ಕುರಿತು ಕಳೆದ ಕೆಲವು ದಿನಗಳಿಂದ ಹಲವು ದೂರುಗಳನ್ನು ಸ್ವೀಕರಿಸಲಾಗಿತ್ತು ಎಂದು ದಶಾಶ್ವಮೇಧ ಎಸಿಪಿ ಅತುಲ್ ಅಂಜನ್ ತ್ರಿಪಾಠಿ ತಿಳಿಸಿದ್ದಾರೆ.
ಈ ದೂರುಗಳ ಹಿನ್ನೆಲೆಯಲ್ಲಿ ದಶಾಶ್ವಮೇಧ ಹಾಗೂ ಚೌಕ್ ಠಾಣೆ ಪೊಲೀಸರ ಜಂಟಿ ತಂಡವನ್ನು ರೂಪಿಸಲಾಗಿತ್ತು ಎಂದು ತ್ರಿಪಾಠಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಶಾಶ್ವಮೇಧ ಪ್ರದೇಶದಿಂದ 15 ಮಂದಿ ಹಾಗೂ ಚೌಕ್‌ನಿಂದ 6 ಮಂದಿ ನಕಲಿ ಅರ್ಚಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಂಜನ್ ತ್ರಿಪಾಠಿ ತಿಳಿಸಿದ್ದಾರೆ.