MGNREGAಗೆ ಬದಲಾಗಿ 'VB G RAM G' ಮಸೂದೆ; ‘ಬಾಪು ಹೆಸರಿನಲ್ಲಿ ಸಮಸ್ಯೆಯೇ?’ ಎಂದು ಕಾಂಗ್ರೆಸ್ ಆಕ್ರೋಶ

ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (MGNREGA) ಬದಲಾಗಿ ಹೊಸ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. Viksit Bharat Guarantee for Rozgar and Ajeevika Mission (Rural) ಎಂಬ ಹೆಸರಿನ ಈ ಮಸೂದೆಯನ್ನು ಸಂಕ್ಷಿಪ್ತವಾಗಿ VB G RAM G ಎಂದು ಕರೆಯಲಾಗುತ್ತದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ ರಾಜಕೀಯವಾಗಿ ಚರ್ಚೆ ತೀವ್ರಗೊಂಡಿದೆ. ಮಸೂದೆ ಅಂಗೀಕಾರ ಖಚಿತಪಡಿಸಿಕೊಳ್ಳಲು ಬಿಜೆಪಿ ವಿಪ್ ಹೊರಡಿಸಿದ್ದು, ಸಂಸದರಿಗೆ ಸದನದಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ಸರಕಾರದ ಪ್ರಕಾರ, ಈ ಮಸೂದೆ Viksit Bharat 2047 ದೃಷ್ಟಿಕೋನದ ಭಾಗವಾಗಿ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯಕ್ಕೆ ಹೊಸ ಚೌಕಟ್ಟನ್ನು ರೂಪಿಸುವ ಉದ್ದೇಶ ಹೊಂದಿದೆ.
2005ರಲ್ಲಿ UPA ಸರಕಾರ ಆರಂಭಿಸಿದ್ದ MGNREGA ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿಯನ್ನು ಒದಗಿಸುತ್ತಿತ್ತು. ಹೊಸ ಮಸೂದೆಯಡಿ ಈ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುವ ಪ್ರಸ್ತಾಪವಿದೆ. ಕೆಲಸ ಪೂರ್ಣಗೊಂಡ ಬಳಿಕ ಒಂದು ಅಥವಾ ಎರಡು ವಾರಗಳೊಳಗೆ ವೇತನ ಪಾವತಿ ಮಾಡಬೇಕು ಎಂದು ಮಸೂದೆ ಹೇಳುತ್ತದೆ. ನಿಗದಿತ ಅವಧಿಯಲ್ಲಿ ಪಾವತಿ ಆಗದಿದ್ದರೆ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯನ್ನೂ ಒಳಗೊಂಡಿದೆ.
ಯೋಜನೆಯಡಿ ಕೈಗೊಳ್ಳುವ ಕೆಲಸಗಳನ್ನು ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತಿನಿಂದ ಚೇತರಿಕೆ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಗರಿಷ್ಠ ಕೃಷಿ ಋತುವಿನಲ್ಲಿ ಗ್ರಾಮೀಣ ಜನರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಈ ಕೆಲಸಗಳನ್ನು ಕೈಗೊಳ್ಳಲು ಅವಕಾಶ ಸಿಗುವುದು ಕಷ್ಟ. ಪಾರದರ್ಶಕತೆಗಾಗಿ ಬಯೋಮೆಟ್ರಿಕ್ ದೃಢೀಕರಣ ಮತ್ತು ಜಿಯೋಟ್ಯಾಗಿಂಗ್ ವ್ಯವಸ್ಥೆ ಜಾರಿಗೊಳ್ಳಲಿದೆ. ವಿವಿಧ ಹಂತಗಳಲ್ಲಿ ಕುಂದುಕೊರತೆ ಪರಿಹಾರ ವ್ಯವಸ್ಥೆ ಒದಗಿಸಲಾಗುತ್ತದೆ.
ಹಣಕಾಸು ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. MGNREGAಯಲ್ಲಿ ಕೌಶಲ್ಯರಹಿತ ಕಾರ್ಮಿಕರ ವೇತನವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತಿದ್ದರೆ, Viksit Bharat Guarantee for Rozgar and Ajeevika Mission ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳಬೇಕಾಗಿದೆ. ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10, ಕೇಂದ್ರಾಡಳಿತ ಪ್ರದೇಶಗಳಿಗೆ ಪೂರ್ಣ ಕೇಂದ್ರ ಅನುದಾನ ನೀಡಲಾಗುತ್ತದೆ. ಯೋಜನೆಗೆ ವಾರ್ಷಿಕವಾಗಿ 1.51 ಲಕ್ಷ ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು, ಇದರಲ್ಲಿ ಕೇಂದ್ರದ ಪಾಲು 95,692 ಕೋಟಿ ರೂಪಾಯಿ ಆಗಿದೆ.
ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, “ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಅಗತ್ಯವೇನು? ಹೆಸರು ಬದಲಾವಣೆ ಎಂದರೆ ದಾಖಲೆಗಳು, ಕಾಗದಪತ್ರಗಳಿಗೆ ಹೆಚ್ಚುವರಿ ವೆಚ್ಚ. ಸಂಸತ್ತು ಜನರ ತುರ್ತು ಸಮಸ್ಯೆಗಳ ಚರ್ಚೆಗೆ ಗಮನ ನೀಡದೆ ಸಾರ್ವಜನಿಕ ಹಣ ವ್ಯರ್ಥ ಮಾಡುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಸಂಸದ ರಂಜೀತ್ ರಂಜನ್, “ಮೊದಲು ನೆಹರು, ಇಂದಿರಾ ಗಾಂಧಿ; ಈಗ ಬಾಪು. ಸರ್ಕಾರಕ್ಕೆ ಹೆಸರುಗಳೇ ಸಮಸ್ಯೆಯಾಗಿದೆ. ಯೋಜನೆಯನ್ನು ಸುಧಾರಿಸುವ ಬದಲು ಕೇವಲ ಹೆಸರು ಬದಲಾಯಿಸುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.







