VB - G RAM G ಮಂಡನೆಗೆ ಮುನ್ನವೇ MGNREGA ನಾಶಗೊಳಿಸಿದ್ದ ಮೋದಿ ಸರಕಾರ

Photo Credit : PTI
ಹೊಸದಿಲ್ಲಿ,ಡಿ.31: 2025 ಅಂತ್ಯಗೊಳ್ಳುತ್ತಿರುವಾಗ ನರೇಂದ್ರ ಮೋದಿ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿ ಅದರ ಸ್ಥಾನದಲ್ಲಿ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯನ್ನು ತಂದಿದೆ. MGNREGA ರದ್ದುಗೊಳಿಸಿರುವ ಕ್ರಮವು ವ್ಯಾಪಕ ಟೀಕೆಗಳಿಗೆ ಗುರಿಯಾಗಿಯಾಗಿದೆಯಾದರೂ,ಹೊಸ ಕಾಯ್ದೆಯನ್ನು ತರುವ ಮೊದಲು MGNREGAವನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗಿತ್ತು ಎಂದು ಸುದ್ದಿ ಜಾಲತಾಣ The Wire ತನ್ನ ವಿಶ್ಲೇಷಣಾ ವರದಿಯಲ್ಲಿ ಬಹಿರಂಗಗೊಳಿಸಿದೆ.
ಕಳೆದ ಒಂದು ದಶಕದ ಇಣುಕು ನೋಟವು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಒದಗಿಸುವ ವಿಶ್ವದ ಅತ್ಯಂತ ದೊಡ್ಡ ಗ್ಯಾರಂಟಿ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿತ್ತು ಎನ್ನುವುದನ್ನು ತೋರಿಸುತ್ತದೆ. ಯೋಜನೆಗೆ ಬಜೆಟ್ ಹಂಚಿಕೆಗಳನ್ನು ನಿರಂತರವಾಗಿ ಕಡಿತ ಮಾಡಲಾಗಿತ್ತು. ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರಿಂದಾಗಿ ಹಲವರ ಜಾಬ್ ಕಾರ್ಡ್ ಗಳು ರದ್ದುಗೊಂಡಿದ್ದವು. ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದರು. ವೇತನ ಪಾವತಿಗಳಲ್ಲಿ ವಿಳಂಬ ಮಾಮೂಲಾಗಿತ್ತು. ಅಂತಿಮವಾಗಿ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ ಎರಡು ದಶಕಗಳಷ್ಟು ಹಳೆಯ ಕಾಯ್ದೆಯನ್ನು ನಾಶಗೊಳಿಸಿ ಅದರ ಸ್ಥಾನದಲ್ಲಿ ಹೊಸ ಕಾಯ್ದೆಯನ್ನು ತರಲಾಗಿದೆ.
ಭಾರತದಲ್ಲಿಯ ಕೃಷಿ ಬಿಕ್ಕಟ್ಟನ್ನು ‘ಕಾರ್ಪೊರೇಟ್ ರಂಗದಿಂದ ಕೃಷಿ ಕ್ಷೇತ್ರದ ಹೈಜಾಕ್’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಬಣ್ಣಿಸಿರುವ ಹಿನ್ನೆಲೆಯಲ್ಲಿ MGNREGAದ ರದ್ದತಿ ನಡೆದಿದೆ. ಹವಾಮಾನದಲ್ಲಿ ಅನಿಯಮಿತ ಬದಲಾವಣೆಗಳು, ಕುಸಿಯುತ್ತಿರುವ ಆದಾಯ, ಹೆಚ್ಚುತ್ತಿರುವ ಗ್ರಾಮೀಣ ಸಾಲ, ಬೆಲೆ ಏರಿಳಿತ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು:ಇವೆಲ್ಲವೂ ಕೃಷಿ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿವೆ.
MGNREGAಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ತನ್ನ ಹಿಂದಿನ ಅನೇಕ ಕ್ರಮಗಳಂತೆ ಮತ್ತೊಮ್ಮೆ ಗ್ರಾಮೀಣ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಮೂಲಭೂತ ಬದಲಾವಣೆಗೆ ಪ್ರಯತ್ನಿಸಿದೆ.
‘ಕಳೆದ 10 ವರ್ಷಗಳಲ್ಲಿ MGNREGA ಮೂಲಭೂತವಾಗಿ ವಿಫಲಗೊಳ್ಳುತ್ತಲೇ ಬಂದಿತ್ತು. ನೀವು ಕಾಯ್ದೆಯೊಂದರ ವಿರೋಧಿಯಾಗಿದ್ದರೆ ಮತ್ತು ಅದನ್ನು ನಿರ್ಬಂಧಿಸಲು,ನಾಶಗೊಳಿಸಲು ಬಯಸಿದರೆ ನೀವು ಅದನ್ನು ರದ್ದುಗೊಳಿಸುತ್ತೀರಿ ಎನ್ನುವುದು ತಾರ್ಕಿಕತೆಯಾಗಿದೆ ಮತ್ತು ಈಗ ಅದೇ ಸಂಭವಿಸಿದೆ’ ಎಂದು The Wireನೊಂದಿಗೆ ಮಾತನಾಡಿದ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ಅಭಿಪ್ರಾಯಿಸಿದ್ದಾರೆ.
ಮೋದಿ ಪ್ರಧಾನಿಯಾದ ಒಂದು ವರ್ಷದ ಬಳಿಕ 2025ರಲ್ಲಿ MGNREGAವನ್ನು ‘ಪ್ರತಿಪಕ್ಷದ ವೈಫಲ್ಯಗಳ ಜೀವಂತ ಸ್ಮಾರಕ’ ಎಂದು ಬಣ್ಣಿಸಿದ್ದರು. ಅವರ 11 ವರ್ಷಗಳ ಅಧಿಕಾರಾವಧಿಯಲ್ಲಿ ಕೇಂದ್ರವು ಯೋಜನೆಗೆ ಬಜೆಟ್ ಹಂಚಿಕೆಯನ್ನು ಕಡಿಮೆ ಮಾಡುತ್ತಲೇ ಬಂದಿತ್ತು.
MGNREGA ರದ್ದುಗೊಳ್ಳುವ ಕೆಲವೇ ತಿಂಗಳುಗಳ ಮುನ್ನ ಮಾರ್ಚ್ನಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ನರೇಗಾದಡಿ ನಿಧಿಗೆ ಕೇಂದ್ರ ಸರಕಾರದ ಪಾಲಿನ ಬಿಡುಗಡೆಯಲ್ಲಿ ನಿರಂತರ ವಿಳಂಬಗಳನ್ನು ಬೆಟ್ಟು ಮಾಡಿತ್ತು.
ಬಿಜೆಪಿ ನೇತೃತ್ವದ ಸರಕಾರವು MGNREGA ಅನುಷ್ಠಾನದಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ 2021ರಿಂದ ಪಶ್ಚಿಮ ಬಂಗಾಳಕ್ಕೆ ಹಣಕಾಸು ಬಿಡುಗಡೆಯನ್ನು ಸ್ಥಗಿತಗೊಳಿಸಿದೆ. ಗಮನಾರ್ಹವಾಗಿ, ಪಶ್ಚಿಮ ಬಂಗಾಳಕ್ಕೆ ಬಾಕಿಗಳನ್ನು ಪಾವತಿಸುವಂತೆ ಮತ್ತು ಯೋಜನೆಯನ್ನು ಪುನರಾರಂಭಿಸುವಂತೆ ಕಲಕತ್ತಾ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದ ಕೆಲವೇ ವಾರಗಳಲ್ಲಿ ಕೇಂದ್ರ ಸರಕಾರವು MGNREGAವನ್ನೇ ರದ್ದುಗೊಳಿಸಿದೆ.
ಸೌಜನ್ಯ: Thewire.in







