ತಮಿಳುನಾಡಿನ ಹಿರಿಯ ಸಿಪಿಎಂ ನಾಯಕ ಎನ್. ಶಂಕರಯ್ಯ ನಿಧನ

ಎನ್. ಶಂಕರಯ್ಯ (Photo: X/TamilComrade)
ಚೆನ್ನೈ: ಹಿರಿಯ ಕಮ್ಯೂನಿಸ್ಟ್ ನಾಯಕ ಎನ್.ಶಂಕರಯ್ಯ ಬುಧವಾರ ನಿಧನರಾಗಿದ್ದಾರೆ. ಅವರನ್ನು ಸೋಮವಾರ ಚಿಕಿತ್ಸೆಗಾಗಿ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಜ್ವರ ಮತ್ತು ನೆಗಡಿಗೆ ತುತ್ತಾಗಿದ್ದರು ಹಾಗೂ ಆಮ್ಲಜನಕದ ಆರ್ದ್ರೀಕರಣ ಮಟ್ಟವೂ ಕುಸಿದಿತ್ತು ಎಂದು ಹೇಳಲಾಗಿದೆ. ಸಾರ್ವಜನಿಕರು ತಮ್ಮ ಅಂತಿಮ ನಮನ ಸಲ್ಲಿಸಲು ಅವರ ಪಾರ್ಥಿವ ಶರೀರವನ್ನು ಟಿ.ನಗರದಲ್ಲಿರುವ ಸಿಪಿಐ(ಎಂ) ಕಚೇರಿಯಲ್ಲಿ ಇಡಲಾಗಿದೆ.
ಸಿಪಿಐ ನ 32 ಸದಸ್ಯರ ಪೈಕಿ ಒಬ್ಬರಾಗಿದ್ದ ಶಂಕರಯ್ಯ, ಎಪ್ರಿಲ್ 11, 1964ರಲ್ಲಿ ನಡೆದಿದ್ದ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಿಂದ ಹೊರ ನಡೆದು, ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಸ್ಥಾಪಿಸಿದ್ದರು.
ತೂತುಕ್ಕುಡಿ ಜಿಲ್ಲೆಯ ಕೋವಿಲ್ ಪಟ್ಟಿಯಲ್ಲಿ ಜನಿಸಿ, ಅಲ್ಲಿಯೇ ಬೆಳೆದಿದ್ದ ಶಂಕರಯ್ಯ, ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಅಲ್ಲೇ ಪೂರೈಸಿದ್ದರು. ನಂತರ ಮಧುರೈನ ಅಮೆರಿಕನ್ ಕಾಲೇಜ್ ಗೆ ಸೇರ್ಪಡೆಯಾಗಿ ಇತಿಹಾಸದಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದರು. ಆದರೆ, ಅವರು ಹಲವಾರು ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡು, ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದರಿಂದ ತಮ್ಮ ಪದವಿಯನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಈ ವರ್ಷದ ಜುಲೈ ತಿಂಗಳಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಮಧುರೈ ಕಾಮರಾಜ್ ವಿಶ್ವವಿದ್ಯಾಲಯ ಮುಂದಾಗಿತ್ತು. ಆದರೆ, ವಿಶ್ವವಿದ್ಯಾಲಯದ ಮನವಿಯನ್ನು ಪುರಸ್ಕರಿಸಲು ವಿಶ್ವವಿದ್ಯಾಲಯಗಳ ಕುಲಪತಿಯಾದ ರಾಜ್ಯಪಾಲ ಆರ್.ಎನ್.ರವಿ ನಿರಾಕರಿಸಿದ್ದರು.
ಸ್ವಾತಂತ್ರ್ಯದ ನಂತರ, ಚುನಾವಣಾ ರಾಜಕಾರಣಕ್ಕಿಳಿದ ಶಂಕರಯ್ಯ, 1967, 1977 ಹಾಗೂ 1980ರಲ್ಲಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು 11 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ತಮಿಳುನಾಡು ಸಿಪಿಐ(ಎಂ) ಘಟಕದಲ್ಲಿ ಹಲವಾರು ಮುಖ್ಯ ಹುದ್ದೆಗಳನ್ನು ಹೊಂದಿದ್ದ ಅವರು, ಪಕ್ಷದೊಳಗೂ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಶಂಕರಯ್ಯ 100 ವರ್ಷ ಪೂರೈಸಿದಾಗ ಅವರಿಗೆ ತಮಿಳುನಾಡಿನ ಅತ್ಯುನ್ನತ ಪುರಸ್ಕಾರವಾದ ‘ತಂಗೈಸಲ್ ತಮಿಳು’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.







