ದಿಲ್ಲಿಗೆ ‘ಇಂದ್ರಪ್ರಸ್ಥ’ ಎಂದು ಮರು ನಾಮಕರಣ ಮಾಡುವಂತೆ ವಿಎಚ್ಪಿ ಆಗ್ರಹ

Photo: newindianexpress
ಹೊಸದಿಲ್ಲಿ, ಅ. 19: ದಿಲ್ಲಿಯ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ದಿಲ್ಲಿಗೆ ‘‘ಇಂದ್ರಪ್ರಸ್ತ’’ ಎಂದು ಮರು ನಾಮಕರಣ ಮಾಡುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ರವಿವಾರ ಆಗ್ರಹಿಸಿದೆ.
ದಿಲ್ಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ವಿಎಚ್ಪಿ ದಿಲ್ಲಿ ಪ್ರಾಂತದ ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತಾ, ‘‘ದಿಲ್ಲಿಯ ಹೆಸರನ್ನು ಅದರ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿಯೊಂದಿಗೆ ಸಂಬಂಧ ಕಲ್ಪಿಸಲು ದಿಲ್ಲಿಗೆ ಇಂದ್ರಪ್ರಸ್ತ ಎಂದು ಮರು ನಾಮಕರಣ ಮಾಡಬೇಕು’’ ಎಂದಿದ್ದಾರೆ.
‘‘ಹೆಸರು ಕೇವಲ ಬದಲಾವಣೆಯಲ್ಲ; ಅವು ದೇಶದ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ. ನಾವು ದಿಲ್ಲಿ ಎಂದು ಹೇಳಿದಾಗ, ಕೇವಲ 2,000 ವರ್ಷಗಳ ಅವಧಿಯನ್ನು ಮಾತ್ರ ನೋಡುತ್ತೇವೆ. ಆದರೆ, ನಾವು ಇಂದ್ರಪ್ರಸ್ತ ಎಂದು ಹೇಳಿದಾಗ, 5000 ವರ್ಷಗಳ ಭವ್ಯ ಇತಿಹಾಸದೊಂದಿಗೆ ಸಂಪರ್ಕ ಹೊಂದುತ್ತೇವೆ’’ ಎಂದು ಅವರು ಹೇಳಿದ್ದಾರೆ.
ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಇಂದ್ರಪ್ರಸ್ಥ ವಿಮಾನ ನಿಲ್ದಾಣ, ದಿಲ್ಲಿ ರೈಲು ನಿಲ್ದಾಣಕ್ಕೆ ಇಂದ್ರಪ್ರಸ್ಥ ರೈಲು ನಿಲ್ದಾಣ, ಶಾಹಜಹಾನ್ಬಾದ್ ಅಭಿವೃದ್ದಿ ಮಂಡಳಿಗೆ ಇಂದ್ರಪ್ರಸ್ಥ ಅಭಿವೃದ್ಧಿ ಮಂಡಳಿ ಎಂದು ಮರು ನಾಮಕರಣ ಮಾಡುವಂತೆ ಕೂಡ ವಿಎಚ್ಪಿ ಆಗ್ರಹಿಸಿದೆ.







