ಕುಮಾವನ್ ವಿಶ್ವವಿದ್ಯಾಲಯದಲ್ಲಿ ಪ್ರಜ್ಞಾಹೀನರಾದ ಉಪ ರಾಷ್ಡ್ರಪತಿ ಜಗದೀಪ್ ಧನಕರ್

ಜಗದೀಪ್ ಧನಕರ್ | PC : PTI
ನೈನಿತಾಲ್: ಬುಧವಾರ ನಡೆದ ಕುಮಾವನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಗದೀಪ್ ಧನಕರ್, ಪ್ರಜ್ಞಾಹೀನರಾದ ಘಟನೆ ನಡೆದಿದೆ.
ಭಾಷಣ ಮುಗಿದ ನಂತರ, ವೇದಿಕೆಯಿಂದ ಕೆಳಗಿಳಿದು, ಸಭಿಕರ ಸರತಿಯಲ್ಲಿ ಕುಳಿತಿದ್ದ ತಮ್ಮ ಮಾಜಿ ಸಂಸದೀಯ ಸಹೋದ್ಯೋಗಿ ಮಹೇಂದ್ರ ಸಿಂಗ್ ಪಾಲ್ರನ್ನು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಸಮೀಪಿಸಿದರು. ಉತ್ತರಾಖಂಡ ಹೈಕೋರ್ಟ್ನಲ್ಲಿ ವಕೀಲರಾಗಿರುವ ಮಹೇಂದ್ರ ಸಿಂಗ್ ಪಾಲ್, 1989ರಲ್ಲಿ ಲೋಕಸಭಾ ಸಂಸದರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಜಗದೀಪ್ ಧನಕರ್ ಕೂಡಾ ರಾಜಸ್ಥಾನದ ಝುಂಝುನುವಿನಿಂದ ಸಂಸದರಾಗಿ ಚುನಾಯಿತರಾಗಿದ್ದರು.
ಜಗದೀಪ್ ಧನಕರ್ ಹಾಗೂ ಮಹೇಂದ್ರ ಸಿಂಗ್ ಪಾಲ್ ಪರಸ್ಪರ ಭೇಟಿಯಾದಾಗ, ಇಬ್ಬರೂ ಭಾವುಕರಾದಂತೆ ಕಂಡು ಬಂದಿತು. ಇಬ್ಬರೂ ಪರಸ್ಪರ ಮಾತುಕತೆ ನಡೆಸಿದ ನಂತರ, ಧನಕರ್ ಅವರು ಪಾಲ್ ಅನ್ನು ಆಲಂಗಿಸಿಕೊಂಡರು ಹಾಗೂ ಅವರ ತೋಳ ತೆಕ್ಕೆಗೆ ಜಾರಿದಂತೆ ಕಂಡು ಬಂದರು.
ಏನೋ ಅನಾಹುತವಾಗಿದೆ ಎಂದು ಅರಿವಾಗುತ್ತಿದ್ದಂತೆಯೇ, ಜಗದೀಪ್ ಧನಕರ್ ಅವರೊಂದಿಗೆ ಬಂದಿದ್ದ ವೈದ್ಯಕೀಯ ತಂಡ, ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಿ, ಅವರನ್ನು ಮರಳಿ ಪ್ರಜ್ಞಾವಸ್ಥೆಗೆ ತಂದಿತು.
ವೈದ್ಯಕೀಯ ತಂಡದ ಆರೈಕೆಯಿಂದ ಶೀಘ್ರದಲ್ಲೇ ಚೇತರಿಸಿಕೊಂಡ ಧನಕರ್, ನಂತರ ರಾಜಭವನಕ್ಕೆ ತೆರಳಿದರು. ಅಲ್ಲಿ ಅವರು ಈ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ.
ಇದಕ್ಕೂ ಮುನ್ನ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಬುಧವಾರದಿಂದ ನೈನಿತಾಲ್ಗೆ ತಮ್ಮ ಮೂರು ದಿನಗಳ ಪ್ರವಾಸವನ್ನು ಆರಂಭಿಸಿದರು.







