ಉಪರಾಷ್ಟ್ರಪತಿ ಚುನಾವಣೆ | ಪ್ರತಿಪಕ್ಷ ಅಭ್ಯರ್ಥಿ ನ್ಯಾ.ಸುದರ್ಶನ್ ರೆಡ್ಡಿ ನಕ್ಸಲ್ ಬೆಂಬಲಿಗ: ಅಮಿತ್ ಶಾ ಆರೋಪ

ಅಮಿತ್ ಶಾ | PC : PTI
ಕೊಚ್ಚಿ,ಆ.22: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ, ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ನಕ್ಸಲ್ವಾದವನ್ನು ಬೆಂಬಲಿಸುತ್ತಿದ್ದಾರೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಶುಕ್ರವಾರ ಆಪಾದಿಸಿದ್ದಾರೆ.
ಒಂದು ವೇಳೆ ಸುದರ್ಶನ ರೆಡ್ಡಿ ಅವರು ನಕ್ಸಲ್ ವಿರೋಧಿ ಸಶಸ್ತ್ರ ನಾಗರಿಕ ಸಂಘಟನೆ ಸಲ್ವಾ ಜುಡುಂ ವಿರುದ್ಧ ತೀರ್ಪನ್ನು ನೀಡದೆ ಇರುತ್ತಿದ್ದಲ್ಲಿ ದೇಶದಲ್ಲಿ ತೀವ್ರವಾದಿ ಎಡಪಂಥೀಯ ಚಳವಳಿಯು 2020ನೇ ಇಸವಿಗೆ ಮೊದಲೇ ಕೊನೆಗೊಳ್ಳುತ್ತಿತ್ತು ಎಂದರು.
ಮಲಯಾಳ ಮನೋರಮಾ ಮಾಧ್ಯಮ ಸಮೂಹವು ಶುಕ್ರವಾರ ಆಯೋಜಿಸಿದ್ದ ಮನೋರಮಾ ನ್ಯೂಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಆಯ್ಕೆಯಿಂದಾಗಿ ಕೇರಳದಲ್ಲಿ ಆ ಪಕ್ಷದ ಗೆಲುವಿನ ಅವಕಾಶಗಳು ಇನ್ನಷ್ಟು ಕ್ಷೀಣಿಸಿದೆ ಎಂದು ಶಾ ಹೇಳಿದ್ದಾರೆ.
‘‘ಸುದರ್ಶನ ರೆಡ್ಡಿ ಅವರು ನಕ್ಸಲ್ ವಾದಕ್ಕೆ ನೆರವಾದ ವ್ಯಕ್ತಿ. ಅವರು ಸಲ್ವಾ ಜುಡುಂ ವಿರುದ್ಧ ತೀರ್ಪನ್ನು ನೀಡಿದ್ದರು. ಒಂದು ವೇಳೆ ಸಲ್ವಾ ಜುಡುಂ ವಿರುದ್ಧ ತೀರ್ಪನ್ನು ನೀಡದೆ ಇರುತ್ತಿದ್ದಲ್ಲಿ ನಕ್ಸಲ್ ಭಯೋತ್ಪಾದನೆಯು 2020ರಲ್ಲೇ ಕೊನೆಗಾಣುತ್ತಿತ್ತು. ನಕ್ಸಲ್ ಸಿದ್ಧಾಂತದಿಂದ ಪ್ರೇರಿತರಾಗಿ ಅವರು ಸಲ್ವಾಜುಡುಂ ವಿರುದ್ಧ ತೀರ್ಪು ನೀಡಿದ್ದರೆಂದು ಶಾ ಆಪಾದಿಸಿದರು. ಸಮಾವೇಶದ ಭಾಗವಾಗಿ ಆಯೋಜಿಸಲಾದ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಾತನಾಡುತ್ತಿದ್ದರು.
2011ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ನೀಡಿದ್ದ ತೀರ್ಪೊಂದರಲ್ಲಿ, ಬುಡಕಟ್ಟು ಯುವಜನರನ್ನು ‘ಕೋಯಾ ಕಮಾಂಡೊಗಳು’ ಅಥವಾ ಸಲ್ವಾಜುಡುಂ ಅಥವಾ ಇನ್ನ್ಯಾವುದೇ ಹೆಸರಿನಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸಿಕೊಳ್ಳುವುದು ಅಸಂವಿಧಾನಿಕ ಹಾಗೂ ಕಾನೂನುಬಾಹಿರವೆಂದು ತೀರ್ಪು ನೀಡಿತ್ತು ಹಾಗೂ ಅವರನ್ನು ಕೂಡಾ ನಿಶಸ್ತ್ರಗೊಳಿಸಬೇಕೆಂದು ಆದೇಶಿಸಿದ್ದರು.
ನಕ್ಸ ವಾದದಲ್ ಏಟನ್ನು ನಕ್ಸಲ್ ಎದುರಿಸಿದೆ. ನಕ್ಸಲ್ ವಾದವನ್ನು ಬೆಂಬಲಿಸಿದ ಮತ್ತು ಸುಪ್ರೀಂಕೋರ್ಟ್ ನಂತಹ ಪವಿತ್ರ ವೇದಿಕೆಯನ್ನು ಅದಕ್ಕೆ ಬಳಸಿಕೊಂಡಂತಹ ವ್ಯಕ್ತಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ಎಡಪಕ್ಷಗಳ ಒತ್ತಡಕ್ಕೆ ಮಣಿದಿರುವುದು ಕೇರಳದ ಜನತೆಗೆ ಗೋಚರವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.







