ರಸ್ತೆ ಅಪಘಾತದಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳತನ ಪ್ರಕರಣದ ಆರೋಪಿಗಳು!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಸ್ತೆ ಅಪಘಾತದಿಂದ ಮನೆಗಳ್ಳತನ ಪ್ರಕರಣದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ದಿಲ್ಲಿಯ ಕಪಶೇರದಲ್ಲಿ ನಡೆದಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ರಸ್ತೆ ಅಪಘಾತದ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಯೊಂದು ಬಂದಿದೆ. ಇದರ ಬೆನ್ನಿಗೇ, ಪೊಲೀಸರು ಸ್ಥಳಕ್ಕೆ ಧಾವಿಸಿ, ಘಟನೆಯ ಕುರಿತು ವಿಚಾರಣೆ ಕೈಗೊಂಡಿದ್ದಾರೆ.
ಮನೆಗಳ್ಳತನದ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ, ಕಳ್ಳರೂ ಕೂಡಾ ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಸುಮಾರು 8.13 ಗಂಟೆಯ ವೇಳೆಗೆ ಕಪಶೇರದಲ್ಲಿ ಸ್ಕೂಟರ್ ಹಾಗೂ ಕಾರೊಂದರ ನಡುವೆ ಢಿಕ್ಕಿ ಸಂಭವಿಸಿರುವ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಯೊಂದು ಬಂದಿತು ಎಂದು ಅವರು ಹೇಳಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ, ಸ್ಕೂಟರ್ ಮೇಲಿದ್ದ ಇಬ್ಬರು ವ್ಯಕ್ತಿಗಳು ಅಸಹಜವಾಗಿ ಭಯಭೀತರಾಗಿದ್ದು, ಆದಷ್ಟೂ ತ್ವರಿತವಾಗಿ ಅಪಘಾತದ ವಿಷಯವನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿರುವಂತೆ ಕಂಡು ಬಂದರು” ಎಂದು ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಕ್ಯಾಂಪ್ ನಿವಾಸಿಗಳೆಂದು ಗುರುತಿಸಲಾಗಿರುವ ರೋಹಿತ್ ರವಿವಾಸ್ (25) ಹಾಗೂ ಕರಂಜೀತ್ (28) ಪೈಕಿ ಓರ್ವ ಆರೋಪಿ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಅನ್ ಲಾಕ್ ಮಾಡಲಾಗದೆ ಒದ್ದಾಡುತ್ತಿದ್ದದ್ದು ಅವರಿಬ್ಬರ ಕುರಿತ ಪೊಲೀಸರ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ.
ಅವರಿಗೆ ಪೊಲೀಸರು ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ, ರಸ್ತೆ ಅಪಘಾತದ ಪ್ರಕರಣವು ಅಪರಾಧ ತನಿಖೆಯ ಸ್ವರೂಪಕ್ಕೆ ತಿರುಗಿದೆ.
“ಅವರಿಬ್ಬರನ್ನೂ ಆಳವಾದ ತನಿಖೆಗೆ ಒಳಪಡಿಸಿದ ಬಳಿಕ, ಕಪಶೇರದಲ್ಲಿನ ಗೋಪಾಲ್ ಜಿ ಕಾಲನಿಯಲ್ಲಿನ ಮನೆಯೊಂದರಲ್ಲಿ ಅದೇ ದಿನ ಬೆಳಗ್ಗೆ ಕಳವು ನಡೆಸಿದ್ದಾಗಿ ಅವರು ಒಪ್ಪಿಕೊಂಡರು. ಲಾಲ್ ಚಂದ್ ಎಂಬ ವ್ಯಕ್ತಿಯಿಂದ ತಾವು ಒಂದು ಬ್ಯಾಗ್ ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ಕಸಿದುಕೊಂಡೆವು ಎಂದು ಅವರು ಉತ್ತರಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು ನೀಡಿದ ಈ ಸುಳಿವಿನ ಮೇರೆಗೆ ದೂರದಾರರ ಬ್ಯಾಗ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಅವರ ಸಹಚರ ಪಂಕಜ್ (33) ಎಂಬ ವ್ಯಕ್ತಿಯನ್ನೂ ಸೋನಿಯಾ ಗಾಂಧಿ ಕ್ಯಾಂಪ್ ನಿಂದ ವಶಕ್ಕೆ ಪಡೆದಿದ್ದಾರೆ. ಈ ವೇಳೆ ರೋಹಿತ್ ರವಿದಾಸ್ ಹಾಗೂ ಕರಂಜೀತ್ ಜೋಡಿ ಮಾರಾಟ ಮಾಡಿದ್ದ ಕಳವು ಮಾಡಿದ್ದ ಮೊಬೈಲ್ ಫೋನ್ ಒಂದು ಆತನ ಬಳಿ ಇರುವುದು ಪತ್ತೆಯಾಗಿದೆ.
ರೋಹಿತ್ ರವಿದಾಸ್ ಹಾಗೂ ಕರಂಜೀತ್ ವೃತ್ತಿಪರ ಕಳ್ಳರಾಗಿದ್ದು, ಅವರು ತಾವು ಮನೆಗಳಿಂದ ಕದ್ದ ವಸ್ತುಗಳನ್ನು ಪಂಕಜ್ ಗೆ ಹಸ್ತಾಂತರಿಸುತ್ತಿದ್ದರು. ಆ ವಸ್ತುಗಳನ್ನು ಆತ ಮಾರಾಟ ಮಾಡಿದ ನಂತರ, ಎಲ್ಲರೂ ತಮ್ಮ ಪಾಲನ್ನು ಹಂಚಿಕೊಂಡು, ಮತ್ತೆ ಕಳ್ಳತನಕ್ಕಿಳಿಯುತ್ತಿದ್ದರು. ಕಳವು ಮಾಡಲಾಗಿದ್ದ ಫೋನ್ ಗಳ ಪೈಕಿ ಒಂದು ಫೋನ್ ಅನ್ನು ಅದಾಗಲೇ ಮಾರಾಟ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ರೋಹಿತ್ ರವಿದಾಸ್ ಈ ಹಿಂದೆ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಪಂಕಜ್ ವಿರುದ್ಧ ಅದಾಗಲೇ ಎರಡು ಪ್ರಕರಣಗಳು ದಾಖಲಾಗಿವೆ ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದೂ ಪೊಲೀಸರು ಹೇಳಿದ್ದಾರೆ.







