ಪ್ರವಾಹಪೀಡಿತ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ; ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೊ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

Screengrab:X/@ians_india
ಲಕ್ನೊ: ಪ್ರವಾಹಪೀಡಿತ ರಸ್ತೆಯೊಂದರಲ್ಲಿ ಬೈಕ್ ನಲ್ಲಿ ಹಿಂದೆ ಕುಳಿತು ಹೋಗುತ್ತಿರುವ ಮಹಿಳೆಯೊಬ್ಬರಿಗೆ ಗುಂಪೊಂದು ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಲಕ್ನೊದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೊದಲ್ಲಿ, ಓರ್ವ ಪುರುಷ ಹಾಗೂ ಓರ್ವ ಮಹಿಳೆಯು ಪ್ರವಾಹಪೀಡಿತ ರಸ್ತೆಯನ್ನು ಬೈಕ್ ನಲ್ಲಿ ದಾಟುವಾಗ, ತಾಜ್ ಹೋಟೆಲ್ ಸೇತುವೆಯ ಬಳಿ ಬೈಕ್ ಅನ್ನು ಸುತ್ತುವರಿದಿರುವ ಯುವಕರ ಗುಂಪೊಂದು, ಅವರಿಬ್ಬರ ಮೇಲೆ ನೀರು ಎರಚಿರುವುದು ಸೆರೆಯಾಗಿದೆ.
ಆ ಬೈಕ್ ಯುವಕರ ಗುಂಪನ್ನು ದಾಟಿಕೊಂಡು ಮುನ್ನಡೆದಾಗ, ಕೆಲವು ಯುವಕರು ಆ ಬೈಕ್ ಅನ್ನು ಹಿಂದಕ್ಕೆ ಎಳೆದಿದ್ದರಿಂದ, ಅವರಿಬ್ಬರೂ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಪ್ರವಾಹಪೀಡಿತ ರಸ್ತೆಯ ಮೇಲೆ ಬಿದ್ದಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ.
ಆ ಬೈಕ್ ಅನ್ನು ಹಿಂದಕ್ಕೆ ಎಳೆಯುವುದಕ್ಕೂ ಮುನ್ನ, ಓರ್ವ ಯುವಕ ಮಹಿಳೆಯ ಮೈಯನ್ನು ತಡವುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ಸಂದರ್ಭದಲ್ಲಿ ವಾಹನದಿಂದ ಕೆಳಕ್ಕೆ ಬಿದ್ದಿರುವ ಆ ಮಹಿಳೆಯು, ನಂತರ ಇತರರ ನೆರವಿನಿಂದ ಮೇಲೆದ್ದಿದ್ದಾರೆ.
ನಂತರ ಮಧ್ಯಪ್ರವೇಶಿಸಿರುವ ಪೊಲೀಸರು, ಆ ಗುಂಪನ್ನು ಸ್ಥಳದಿಂದ ಚದುರಿಸಿದ್ದಾರೆ. ಪುರುಷ ಹಾಗೂ ಮಹಿಳೆಗೆ ಕಿರುಕುಳ ನೀಡುವುದರಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ ಎಂದು ವರದಿಯಾಗಿದೆ.







