Vijay Hazare Trophy | ಸೂರ್ಯವಂಶಿ ಬ್ಯಾಟಿಂಗ್ ಕೌಶಲವನ್ನು ಸಚಿನ್ ಗೆ ಹೋಲಿಸಿದ ಶಶಿ ತರೂರ್!

ವೈಭವ್ ಸೂರ್ಯವಂಶಿ , ಶಶಿ ತರೂರ್ | Photo Credit : PTI
ಹೊಸದಿಲ್ಲಿ: ಹದಿನಾಲ್ಕರ ಹರೆಯದ ಬ್ಯಾಟಿಂಗ್ ಕೌತುಕ ವೈಭವ್ ಸೂರ್ಯವಂಶಿ ಇದೀಗ ಭಾರತದ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದು. ಅದ್ಭುತ ಬ್ಯಾಟಿಂಗ್ ಕೌಶಲದಿಂದ ಅಭಿಮಾನಿಗಳು, ಪರಿಣತರು ಮತ್ತು ಮಾಜಿ ಆಟಗಾರರನ್ನು ಬೆರಗುಗೊಳಿಸಿರುವ ಪೋರ ದೇಶಿ ಕ್ರಿಕೆಟ್ ನಲ್ಲಿ ದಾಖಲೆ ಸೃಷ್ಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಹಿರಿಯ ರಾಜಕಾರಣಿ ಮತ್ತು ಕ್ರಿಕೆಟ್ಪ್ರೇಮಿ ಶಶಿ ತರೂರ್ ಈ ಹದಿಹರೆಯದ ಪ್ರತಿಭೆಯ ಬಗೆಗಿನ ರೋಮಾಂಚನವನ್ನು ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಸೂರ್ಯವಂಶಿಯವರ ಇತ್ತೀಚಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿ, "ಹಿಂದಿನ ಬಾರಿ ಹದಿನಾಲ್ಕು ವರ್ಷದ ಬಾಲಕ ಕ್ರಿಕೆಟ್ ನ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದರು. ಅದು ಸಚಿನ್ ತೆಂಡೂಲ್ಕರ್. ಅವರಿಂದ ಏನಾಯಿತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಯಾವುದಕ್ಕೆ ಕಾಯುತ್ತಿದ್ದೇವೆ? ಭಾರತಕ್ಕೆ ವೈಭವ್ ಸೂರ್ಯವಂಶಿ!" ಎಂದು ತರೂರ್ ಹೇಳಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಪ್ಲೇಟ್ ಲೀಗ್ ನಲ್ಲಿ ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಸಿಡಿಸಿ ಮತ್ತೆ ಸುದ್ದಿಯಾಗಿದ್ದರು.
ಕಳೆದ ಸೀಸನ್ ನಲ್ಲಿ ಅಮೋಲ್ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಗಳಿಸಿದ್ದನ್ನು ಹೊರತುಪಡಿಸಿದರೆ ಇದು ಭಾರತದ ಲಿಸ್ಟ್ ಎ ಕ್ರಿಕೆಟ್ನಲ್ಲಿ ಎರಡನೇ ಅತಿವೇಗದ ಶತಕವಾಗಿದೆ. ಜಾಗತಿಕವಾಗಿ ಇದು ನಾಲ್ಕನೇ ಅತಿವೇಗದ ಶತಕವಾಗಿದೆ. ಯುವ ಕ್ರಿಕೆಟರ್ ಅಷ್ಟಕ್ಕೇ ಸೀಮಿತವಾಗದೇ 54 ಎಸೆತಗಳಲ್ಲಿ 150 ರನ್ಗಳ ಗಡಿ ದಾಟಿ, ಅಂತಿಮವಾಗಿ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟ್ ಆದರು. ಬಿಹಾರ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿದರೆ, ಅರುಣಾಚಲ ಪ್ರದೇಶ 177 ರನ್ಗಳಿಗೆ ಆಲೌಟ್ ಆಗಿ 397 ರನ್ಗಳ ಭಾರಿ ಅಂತರದ ಸೋಲೊಪ್ಪಿಕೊಂಡಿತು.







