ಬಿಜೆಪಿ ತೊರೆದ ನಟಿ ವಿಜಯಶಾಂತಿ; ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ವಿಜಯಶಾಂತಿ (Photo: thenewsminute.com)
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವಾರಗಳಿಗಿಂತ ಕಡಿಮೆ ಅವಧಿ ಇರುವಾಗ ಬಿಜೆಪಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು, ಹಿರಿಯ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಎಂ. ವಿಜಯಶಾಂತಿ ಪಕ್ಷದ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಇನ್ನು ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು thenewsminute.com ವರದಿ ಮಾಡಿದೆ.
ಕಳೆದ ಕೆಲವು ತಿಂಗಳಿನಿಂದ ಪಕ್ಷದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಕಾಣಿಸಿಕೊಳ್ಳದೆ ಇದ್ದ ವಿಜಯಶಾಂತಿ, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಜಿ.ಕೃಷ್ಣಾ ರೆಡ್ಡಿ ಅವರಿಗೆ ರವಾನಿಸಿದ್ದಾರೆ. ಅವರು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಾಜಿ ಸಂಸದರಾದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಮತ್ತು ಜಿ.ವಿವೇಕಾನಂದ್ ಹಾಗೂ ಮತ್ತೊಬ್ಬ ಬಿಜೆಪಿ ನಾಯಕ ಎನುಗು ರವೀಂದರ್ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ತೆಲುಗು ಚಿತ್ರಗಳಲ್ಲಿನ ತಮ್ಮ ಸಾಹಸಮಯ ಪಾತ್ರಗಳಿಂದ ‘ಲೇಡಿ ಅಮಿತಾಭ್’ ಎಂದೇ ಜನಪ್ರಿಯರಾಗಿದ್ದ ವಿಜಯಶಾಂತಿ ಡಿಸೆಂಬರ್ 2020ರಲ್ಲಿ ಬಿಜೆಪಿಗೆ ಮರಳಿದ್ದರು. ಇದಕ್ಕೂ ಮುನ್ನ, ಅವರು 1997ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 2005ರಲ್ಲಿ ಬಿಜೆಪಿಯನ್ನು ತೊರೆದಿದ್ದ ಅವರು, ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟಕ್ಕಾಗಿ ‘ತಲ್ಲಿ ತೆಲಂಗಾಣ’ ಎಂಬ ತಮ್ಮದೇ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದ್ದರು. ನಂತರ ಆ ಪಕ್ಷವನ್ನು ಟಿಆರ್ಎಸ್(ಈಗ ಬಿಆರ್ಎಸ್)ನೊಂದಿಗೆ ವಿಲೀನಗೊಳಿಸಿ, 2009ರಲ್ಲಿ ಮೇಡಕ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾಗಿದ್ದರು.







