ವಿಳಿಂಜಮ್ ಬಂದರಿನ ಉದ್ಘಾಟನೆಯಲ್ಲಿ ಪಿಣರಾಯಿ,ತರೂರ್ ಉಪಸ್ಥಿತಿ; ಹಲವರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಲಿದೆ ಎಂದು ಇಂಡಿಯಾ ಮೈತ್ರಿಕೂಟಕ್ಕೆ ಕುಟುಕಿದ ಪ್ರಧಾನಿ

PC : PTI
ತಿರುವನಂತಪುರ: ವಿಳಿಂಜಂ ಆಳಸಮುದ್ರ ಬಂದರಿನ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕಾಂಗ್ರೆಸ್ ಸಂಸದ ಶಶಿತರೂರ್ ಅವರ ಉಪಸ್ಥಿತಿಯು ಹಲವರಿಗೆ ‘ನಿದ್ದೆಯಿಲ್ಲದ ರಾತ್ರಿಗಳನ್ನು’ ತಂದುಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಮೈತ್ರಿಕೂಟವನ್ನು ನೇರವಾಗಿ ಹೆಸರಿಸದೆ ಹೇಳಿದರು.
ಕೇರಳದ ತಿರುವನಂತಪುರಂ ಸಮೀಪ 8900 ಕೋಟಿ ರೂ. ವೆಚ್ಟದಲ್ಲಿ ನಿರ್ಮಿಸಲಾದ ವಿಳಿಂಜಮ್ ಆಳಸಮುದ್ರ ಬಹುಪಯೋಗಿ ಅಂತಾರಾಷ್ಟ್ರೀಯ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘‘ ಇಲ್ಲಿ ಒಂದೆಡೆ ಹಲವಾರು ಅವಕಾಶಗಳನ್ನು ತೆರೆದಿಡುವ ಅಗಾಧವಾದ ಸಮುದ್ರವಿದ್ದರೆ, ಇನ್ನೊಂದೆಡೆ ಪ್ರಕೃತಿಯ ಸೌಂದರ್ಯ ನೆಲೆಸಿದೆ. ಇವುಗಳ ನಡುವೆ ಸ್ಥಾಪನೆಯಾಗಿರುವ ‘‘ ವಿಳಿಂಜಂ ಅಂತಾರಾಷ್ಟ್ರೀಯ ಅಳಸಮುದ್ರ ಬಹುಪಯೋಗಿ ಬಂದರು’’ ನವಯುಗದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ವಿಳಂಜಮ್ ಬಂದರು ದೇಶಕ್ಕೆ ಹಾಗೂ ಕೇರಳಕ್ಕ ಆರ್ಥಿಕ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ಇಟ್ಟಂತಹ ಒದು ದೊಡ್ಡ ಹೆಜ್ಜೆಯಾಗಿದೆ ಎಂದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ನಾಯಕ,ಸಂಸದ ಶಶಿಥರೂರ್ , ಉದ್ಯಮಿ ಗೌತಮ್ ಆದಾನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನಿಗೆ ಕೆ.ಸಿ. ವೇಣುಗೋಪಾಲ್ ತಿರುಗೇಟು:
ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮೋದಿಯವರ ವ್ಯಂಗ್ಯಕ್ಕೆ ತಿರುಗೇಟು ನೀಡಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಜಾತಿಗಣತಿಯಂತಹ ವಿಚಾರಗಳಲ್ಲಿ ಪ್ರಧಾನಿಯವರನ್ನು ಹೊಣೆಗಾರರನ್ನಾಗಿ ಮಾಡುವುದನ್ನು ತಮ್ಮ ಪಕ್ಷ ಮುಂದುವರಿಸಲಿದೆಯೆಂದು ಹೇಳಿದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘‘ಪಹಲ್ಗಾಮ್ನಲ್ಲಿ ಭೀಕರ ಭಯೋತ್ಪಾದಕ ದಾಳಿಯ ನಂತರವೂ ಪ್ರಧಾನಿಯವರು ನೈಜ ಬೆದರಿಕೆಯಾದ ಪಾಕಿಸ್ತಾನದ ಜೊತೆ ಸಂಘರ್ಷ ನಡೆಸುವ ಬದಲು ಪ್ರತಿಪಕ್ಷ ನಾಯಕರ ನಿದ್ದೆಯನ್ನು ಕೆಡಿಸುವ ಕುರಿತಾದ ಗೀಳನ್ನು ರೂಢಿಸಿಕೊಂಡಿದ್ದಾರೆ. ಅವರ ಉದ್ದೇಶ ಸ್ಪಟಿಕದಷ್ಟು ಸ್ಪಷ್ಟವಾಗಿದೆ. ಅದೇನೆಂದರೆ ಅವರ ನಿಜವಾದ ಧಣಿಯಾದ ಅದಾನಿಯನ್ನು ಸಂತೃಪ್ತಿ ಪಡಿಸುವುದಾಗಿದೆ ಎಂದರು.







