ಜೈಲಿನಿಂದ ಡ್ರಗ್ ಪೆಡ್ಲರ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ: 45 ಮಂದಿಯ ವಿರುದ್ಧ ಪ್ರಕರಣ ದಾಖಲು; ವಿಡಿಯೊ ವೈರಲ್

Photo Credit: iStock
ಥಾಣೆ: ಜೈಲಿನಿಂದ ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದಡಿ ಬಂಧಿತನಾಗಿದ್ದ ಆರೋಪಿಯೊಬ್ಬ ಬಿಡುಗಡೆಯಾಗಿದ್ದಕ್ಕೆ ಜನರ ಗುಂಪೊಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ, ಕಾನೂನು ಬಾಹಿರ ಗುಂಪುಗೂಡುವಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ, ಮೀರಾ-ಭಯಾಂಡರ್ ವಸಾಯಿ-ವಿರಾರ್ ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189(ಕಾನೂನುಬಾಹಿರ ಗುಂಪುಗೂಡುವಿಕೆ) ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಅಡಿ 45 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಮಾದಕ ದ್ರವ್ಯ ಹಾಗೂ ಮನೋತ್ತೇಜಕ ವಸ್ತುಗಳ ಕಾಯ್ದೆ ಅಡಿ ಬಂಧಿಸಲಾಗಿದ್ದ ಕಮ್ರನ್ ಮುಹಮ್ಮದ್ ಖಾನ್ ಎಂಬ ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಿಯು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.
ಆತನ ಬಿಡುಗಡೆಯನ್ನು ಸ್ವಾಗತಿಸಲು ಕಮ್ರನ್ ನ ಮಾಜಿ ಸಹ ಕೈದಿಗಳು ಹಾಗೂ ಇನ್ನಿತರ 35 ಮಂದಿ ಜುಲೈ 16ರಂದು ಥಾಣೆಯ ಸೆಂಟ್ರಲ್ ಜೈಲಿನ ಬಳಿ ನೆರೆದಿದ್ದರು. ಅಲ್ಲಿಂದ ಕಾರುಗಳ ಬೆಂಗಾವಲಿನೊಂದಿಗೆ ಮೀರಾ ರಸ್ತೆಯಲ್ಲಿರುವ ನಯಾನಗರ್ ಗೆ ತೆರಳಿದ್ದ ಆ ಗುಂಪು, ಹೋಟೆಲೊಂದರ ಎದುರಿಗೆ ಪಟಾಕಿಗಳನ್ನು ಸಿಡಿಸಿ, ಘೋಷಣೆಗಳನ್ನು ಕೂಗಿತ್ತು ಎಂದು ಅವರು ತಿಳಿಸಿದ್ದಾರೆ.
“ಆ ಗುಂಪು ಭಾರಿ ಸದ್ದಿನ ಸಂಗೀತವನ್ನೂ ಹಾಕಿತ್ತಲ್ಲದೆ, ಭಯದ ವಾತಾವರಣ ಹಾಗೂ ಸಾರ್ವಜನಿಕ ಧಕ್ಕೆಯನ್ನುಂಟು ಮಾಡಿತ್ತು” ಎಂದು ಅವರು ಹೇಳಿದ್ದಾರೆ.
ಮಾದಕ ದ್ರವ್ಯ ಕಳ್ಳಸಾಗಣೆ ಆರೋಪಿ ಹಾಗೂ ಆತನ ಸಹಚರರ ಸಾರ್ವಜನಿಕ ಸಂಭ್ರಮಾಚರಣೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗಿದೆ.







