'ವರನೇ ಇಲ್ಲದೆ ಮದುವೆ': ಉತ್ತರ ಪ್ರದೇಶ ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಲ್ಲಿ ಭಾರೀ ಅವ್ಯವಹಾರ!
ತಮಗೆ ತಾವೇ ಹಾರ ಹಾಕಿಕೊಂಡ ವಧುಗಳು

Screengrab: Youtube/News 24
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರದ 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ'ಯಡಿ ನಡೆದ ವಿವಾಹದಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಸರ್ಕಾರದ ವೆಚ್ಚದಲ್ಲಿ ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯಲ್ಲಿ 568 ಜೋಡಿಗಳು ಜನವರಿ 25 ರಂದು ವಿವಾಹವಾಗಿದ್ದರು.
ಆದರೆ, ಸರ್ಕಾರದಿಂದ ಸಿಗುವ ಸವಲತ್ತಿಗೆ ಬೇಕಾಗಿ ಕೆಲವರು ನಕಲಿ ವಧು ವರರಾಗಿ ಪಾಲ್ಗೊಂಡಿದ್ದರೆ, ಇನ್ನು ಕೆಲವು ವಧುಗಳಿಗೆ ವರಗಳೇ ಇರಲಿಲ್ಲ. ಅವರೆಲ್ಲರೂ ತಮಗೆ ತಾವೇ ಹಾರ ಹಾಕಿಕೊಂಡಿದ್ದರು ಎಂದು ವರದಿಯಾಗಿದೆ.
ಅವರಲ್ಲಿ ಇನ್ನೂ ಕೆಲವರು ಈಗಾಗಲೇ ಮದುವೆ ಆದವರು ಎಂಬ ವಿಚಾರವೂ ಹೊರಬಂದಿದೆ. ಅಲ್ಲದೆ, ಗುಂಪಿನಲ್ಲಿ ಅನೇಕರು ಸಹೋದರ ಸಹೋದರಿಯರು ವಧು-ವರರಂತೆ ನಟಿಸಿದ್ದರೆ, ಮತ್ತೆ ಕೆಲವರು ಅಪ್ರಾಪ್ತ ವಯಸ್ಕರು ಇದ್ದರು ಎಂದು ವರದಿ ಆಗಿದೆ.
ಈ ಯೋಜನೆ ಮೂಲಕ ಸರ್ಕಾರವು ಬಡ ಕುಟುಂಬದ ಹುಡುಗಿಯರ ಮದುವೆಗೆ 51 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿತ್ತು. ದಂಪತಿಗೆ ಉಡುಗೊರೆ ನೀಡಲು 10 ಸಾವಿರ, ಅತಿಥಿಗಳ ಆಹಾರ ಮತ್ತು ಪಾನೀಯಗಳಿಗೆ 6 ಸಾವಿರ ಮತ್ತು ಹುಡುಗಿಯ ಖಾತೆಗೆ 35 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಪಡಿಸಿತ್ತು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಎಡಿಒ ಸೇರಿದಂತೆ 9 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖಾ ಸಮಿತಿ ರಚಿಸಲಾಗಿದೆ.







