ವಾರಣಾಸಿಯ ಅವಿವಾಹಿತ ಸಂತನಿಗೆ 50 ಮಕ್ಕಳು! ; ಮತದಾರರ ಪಟ್ಟಿ ವೈರಲ್ ಬೆನ್ನಲ್ಲೇ ವ್ಯಾಪಕ ಟೀಕೆ

Photo credit: X/@INCUttarPradesh
ಲಕ್ನೋ: ಪ್ರತಿಪಕ್ಷಗಳ ‘ಮತ ಕಳ್ಳತನ’ ಆರೋಪ ಕುರಿತು ನಡೆಯುತ್ತಿರುವ ರಾಜಕೀಯ ಕಚ್ಚಾಟದ ನಡುವೆ ಅವಿವಾಹಿತ ಸಂತರೋರ್ವರನ್ನು 50 ಮಕ್ಕಳ ತಂದೆಯನ್ನಾಗಿ ತೋರಿಸಿರುವ ಮತದಾರರ ಪಟ್ಟಿಯು ವೈರಲ್ ಆಗಿದೆ. ಮತಪಟ್ಟಿಯ ಪ್ರಕಾರ ಸಂತರ ಹಿರಿಯ ಪುತ್ರನಿಗೆ 72 ವರ್ಷ ವಯಸ್ಸಾಗಿದ್ದರೆ ಕಿರಿಯ ಪುತ್ರನಿಗೆ 28ರ ಹರೆಯ. ಸಂತರನ್ನು 50 ಮಕ್ಕಳ ತಂದೆಯಾಗಿಸಿರುವ ಈ ಮತದಾರರ ಪಟ್ಟಿಯು ಭಾರೀ ವಿವಾದವನ್ನು ಸೃಷ್ಟಿಸಿದ್ದು, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅದರ ನಿಷ್ಪಕ್ಷತೆಯನ್ನು ಪ್ರಶ್ನಿಸಿದೆ.
ವಾರಣಾಸಿಯ ರಾಮಜಾನಕಿ ದೇವಸ್ಥಾನದ ಸ್ಥಾಪಕ ಸ್ವಾಮಿ ರಾಮಕಮಲ ದಾಸ್ ಅವರನ್ನು 50 ಮಕ್ಕಳ ತಂದೆ ಎಂದು ಉಲ್ಲೇಖಿಸಲಾಗಿದೆ. ಮತದಾರರ ಪಟ್ಟಿಯಂತೆ ಬನ್ವಾರಿ ದಾಸ್(72) ಅವರ ಹಿರಿಯ ಪುತ್ರನಾಗಿದ್ದರೆ ರಾಘವೇಂದ್ರ(28) ಕಿರಿಯ ಪುತ್ರನಾಗಿದ್ದಾರೆ. ಅಷ್ಟಕ್ಕೂ ರಾಮಕಮಲ ದಾಸ್ ಜೀವನದಲ್ಲೆಂದೂ ಮದುವೆಯೇ ಆಗಿಲ್ಲ.
‘ಚುನಾವಣಾ ಆಯೋಗದ ಇನ್ನೊಂದು ಪವಾಡವನ್ನು ನೋಡಿ... ರಾಮಕಮಲ ದಾಸ್ ಅವರನ್ನು 50 ಮಕ್ಕಳ ತಂದೆ ಎಂದು ತೋರಿಸಲಾಗಿದೆ. ಚುನಾವಣಾ ಆಯೋಗವು ಇದನ್ನು ದೋಷ ಎಂದು ತಳ್ಳಿ ಹಾಕುತ್ತದೆಯೇ ಅಥವಾ ವಂಚನೆ ಎಂದು ಒಪ್ಪಿಕೊಳ್ಳುತ್ತದೆಯೇ?’ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ನಲ್ಲಿ ಪ್ರಶ್ನಿಸಿದೆ. ವೈರಲ್ ಆಗಿರುವ ಮತದಾರರ ಪಟ್ಟಿಯನ್ನೂ ಅದು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.
ಆದರೆ,ವಾರಣಾಸಿಯ ಸಂತ ಸಮುದಾಯವು ಹಿಂದು ಧರ್ಮದಲ್ಲಿ ಸಂತರು ಅನುಸರಿಸುತ್ತಿರುವ ಸಂಪ್ರದಾಯಗಳನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಆರೋಪಿಸಿದೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸಂತರು ಅನುಸರಿಸುತ್ತಿರುವ ಸಂಪ್ರದಾಯಗಳನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದರು.
ಈ ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜಾನಪದ ಗಾಯಕಿ ನೇಹಾ ಸಿಂಗ್ ರಾಠೋರ್, ಆರ್ಜೆಡಿ ನಾಯಕಿ ಕಂಚನ್ ಯಾದವ್ ಮತ್ತು ಇತರ ಕೆಲವು ಲೇಖಕರ ವಿರುದ್ಧವೂ ತಾನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಸನಾತನ ಧರ್ಮದಲ್ಲಿ ಸಂತರೋರ್ವರಿಂದ ದೀಕ್ಷೆಯನ್ನು ಸ್ವೀಕರಿಸಿದವರು ಅವರ ಶಿಷ್ಯರಾಗುತ್ತಾರೆ, ಶಿಷ್ಯರು ತಮ್ಮ ಗುರುವಿನ ಜೈವಿಕ ಮಕ್ಕಳಲ್ಲದಿದ್ದರೂ ಅವರನ್ನು ತಮ್ಮ ತಂದೆಯೆಂದು ಉಲ್ಲೇಖಿಸುವ ಸಂಪ್ರದಾಯವಿದೆ. ಶಿಷ್ಯರು ತಮ್ಮ ಗುರುವಿನ ಹೆಸರನ್ನು ತಂದೆ ಕಾಲಮ್ನಲ್ಲಿ ನಮೂದಿಸಬಹುದು ಎಂದು ಹೇಳಿದ ಜಿತೇಂದ್ರಾನಂದ,ಇದರ ಆಧಾರದಲ್ಲಿ ಆಧಾರ್ ಕಾರ್ಡ್ಗಳು ಮತ್ತು ಮತದಾರರ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತದೆ. ಇದೇ ಕಾರಣದಿಂದಾಗಿ ಗುರುವಿಗೆ ಕೇವಲ 50 ವರ್ಷ ವಯಸ್ಸಾಗಿದ್ದರೂ ಕೆಲವು ಮಕ್ಕಳಿಗೆ 70 ವರ್ಷ ವಯಸ್ಸಾಗಿರಬಹುದು ಎಂದರು. ತನ್ನ ದೃಷ್ಟಿಕೋನವನ್ನು ಮಂಡಿಸಲು ತಾನು ಚುನಾವಣಾ ಆಯೋಗವನ್ನೂ ಭೇಟಿಯಾಗುವುದಾಗಿ ಅವರು ತಿಳಿಸಿದರು.
वाराणसी में चुनाव आयोग का एक और चमत्कार देखिए!
— UP Congress (@INCUttarPradesh) August 12, 2025
मतदाता सूची में एक ही व्यक्ति 'राजकमल दास' के नाम पर 50 बेटों का रिकॉर्ड दर्ज है!
सबसे छोटा बेटा राघवेन्द्र- उम्र 28 साल,
और सबसे बड़ा बेटा बनवारी दास- उम्र 72 साल!
क्या चुनाव आयोग इस गड़बड़ी को भी सिर्फ त्रुटि कहकर टाल देगा या… pic.twitter.com/jVmucDKUOe







