ವಿಶಾಖಪಟ್ಟಣ | ಪಾಕಿಸ್ತಾನ ಪರ ಬೇಹುಗಾರಿಕೆ ಪ್ರಕರಣ: ಅಶೋಕ್ ಕುಮಾರ್, ವಿಕಾಸ್ ಕುಮಾರ್ಗೆ NIA ನ್ಯಾಯಾಲಯದಿಂದ ಶಿಕ್ಷೆ

NIA | Photo Credit : PTI
ವಿಶಾಖಪಟ್ಟಣ: ನೌಕಾಪಡೆಯ ರಹಸ್ಯ ವಿವರಗಳನ್ನು ಪಾಕಿಸ್ತಾನದ ಏಜೆಂಟರುಗಳಿಗೆ ರವಾನಿಸುತ್ತಿದ್ದ ಬೇಹುಗಾರಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವೈಝಾಗ್ನಲ್ಲಿರುವ ವಿಶೇಷ ನ್ಯಾಯಾಲಯವು ಇಬ್ಬರು ಆರೋಪಿಗಳಾದ ಅಶೋಕ್ ಕುಮಾರ್ ಮತ್ತು ವಿಕಾಸ್ ಕುಮಾರ್ ಗೆ ಶಿಕ್ಷೆ ವಿಧಿಸಿದೆ.
ರಾಜಸ್ಥಾನದ ಜುನ್ಜುನು ಜಿಲ್ಲೆಯ ಅಶೋಕ್ ಕುಮಾರ್ ಹಾಗೂ ಅಲ್ವಾರ್ ಜಿಲ್ಲೆಯ ವಿಕಾಸ್ ಕುಮಾರ್ ಗೆ UA(P) ಕಾಯ್ದೆ ಸೆಕ್ಷನ್ 18 ಮತ್ತು ಅಧಿಕೃತ ರಹಸ್ಯ ಕಾಯ್ದೆ ಸೆಕ್ಷನ್ 3 ಅಡಿಯಲ್ಲಿ ಐದು ವರ್ಷ ಹನ್ನೊಂದು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದೆ. ತಲಾ 5,000 ರೂಪಾಯಿ ದಂಡವನ್ನು ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನ್ವಯವಾಗಲಿದೆ.
ಈ ತೀರ್ಪಿನಿಂದ 15 ಮಂದಿಯ ಬಂಧತರ ಪೈಕಿ ಈಗಾಗಲೇ ಎಂಟು ಮಂದಿಗೆ ಶಿಕ್ಷೆ ಖಚಿತಗೊಂಡಿದೆ. ಡಿಸೆಂಬರ್ 2019ರಲ್ಲಿ ಅಶೋಕ್ ನನ್ನು ಮುಂಬೈಯಲ್ಲಿ ಮತ್ತು ವಿಕಾಸ್ ನನ್ನು ಕರ್ನಾಟಕದ ಕಾರವಾರದಲ್ಲಿ ಬಂಧಿಸಲಾಗಿತ್ತು. ನಂತರ NIA ಜೂನ್ 2020ರಲ್ಲಿ ಮೊದಲ ಚಾರ್ಜ್ಶೀಟ್ ಹಾಗೂ 2021ರ ಮಾರ್ಚ್ನಲ್ಲಿ ಪೂರಕ ಚಾರ್ಜ್ಶೀಟ್ ಸಲ್ಲಿಸಿತು.
ಉಳಿದ ಆರೋಪಿಗಳ ವಿಚಾರಣೆಗಳು ಇನ್ನೂ ನ್ಯಾಯಾಲಯದಲ್ಲಿ ಸಾಗುತ್ತಿವೆ.
ಭಾರತೀಯ ನೌಕಾಪಡೆಯ ಪ್ರಮುಖ ನೆಲೆಗಳ ವಿವರಗಳನ್ನು ವಿದೇಶಿ ಏಜೆಂಟ್ಗಳಿಗೆ ಸೋರಿಕೆ ಮಾಡುವ ದೊಡ್ಡ ಪಿತೂರಿ ಈ ಪ್ರಕರಣದಿಂದ ಬಹಿರಂಗವಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣವನ್ನು ಮೊದಲಿಗೆ ವಿಜಯವಾಡ ಕೌಂಟರ್ ಇಂಟೆಲಿಜೆನ್ಸ್ ಪೊಲೀಸ್ ದಾಖಲು ಮಾಡಿತ್ತು, ಬಳಿಕ 2019ರ ಡಿಸೆಂಬರ್ನಲ್ಲಿ ತನಿಖೆಯನ್ನು NIAಗೆ ಹಸ್ತಾಂತರಿಸಲಾಗಿತ್ತು.







