‘‘ಮತಗಳ್ಳತನ’’ದಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರ: ಡಿಎಂಕೆ

ಡಿಎಮ್ಕೆಯ ಹಿರಿಯ ನಾಯಕ ಐ. ಪೆರಿಯಸಾಮಿ | PC : PTI
ಚೆನ್ನೈ, ಆ. 16: ‘‘ಮತಗಳ್ಳತನ’’ದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ತಮಿಳುನಾಡು ಸಚಿವ ಹಾಗೂ ಡಿಎಂಕೆಯ ಹಿರಿಯ ನಾಯಕ ಐ. ಪೆರಿಯಸಾಮಿಯನ್ನು ಗುರಿಯಾಗಿಸಿ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ದಾಳಿಗಳನ್ನು ನಡೆಸುತ್ತಿದೆ ಎಂದು ರಾಜ್ಯದ ಆಡಳಿತಾರೂಢ ಪಕ್ಷ ಶನಿವಾರ ಆರೋಪಿಸಿದೆ.
‘‘ಮತಗಳ್ಳತನ’’ ಎನ್ನುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟು ಹಾಕಿದ ಕಲ್ಪನೆಯಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿ ‘‘ಮತಗಳನ್ನು ಕದಿಯುವ’’ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂಬುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿಯು ದೇಶದ ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ತನ್ನ ‘‘ಚುನಾವಣಾ ಉಪಕರಣ’’ಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಡಿಎಂಕೆಯ ಹಿರಿಯ ನಾಯಕ ಭಾರತಿ ಹೇಳಿದ್ದಾರೆ.
ಇತರರು ‘‘ಅಕ್ರಮವಾಗಿ ಕಪ್ಪು ಹಣ ಬಿಳುಪು ಮಾಡುತ್ತಿದ್ದಾರೆ’’ ಎಂದು ಆರೋಪಿಸುವ ಅದೇ ಬಿಜೆಪಿ, ‘‘ಮತಗಳನ್ನು ಕದ್ದು ಅಧಿಕಾರಕ್ಕೆ ಬರುತ್ತಿದೆ’’ ಎಂದು ಅವರು ಆರೋಪಿಸಿದರು.
‘‘ಚುನಾವಣಾ ಆಯೋಗವನ್ನು ಬಳಸಿಕೊಂಡು ಚುನಾವಣಾ ಅಕ್ರಮದಲ್ಲಿ ತೊಡಗಿರುವ ಬಿಜೆಪಿಯ ಬಂಡವಾಳ ಬಯಲಾಗಿದೆ. ಬಿಜೆಪಿಯ ಮೋಸದ ಬಗ್ಗೆ ದೇಶವೇ ಬೆಚ್ಚಿಬಿದ್ದಿದೆ. ಮತಗಳ್ಳತನದಿಂದ ಜನರ ಗಮನವನ್ನು ಬೇರೆಡೆ ಸೆಳೆಯವುದಕ್ಕಾಗಿ ಅನುಷ್ಠಾನ ನಿದೇಶನಾಲಯವು ಪೆರಿಯಸಾಮಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ’’ ಎಂದು ಅವರು ಹೇಳಿದರು.







