ಮತಪಟ್ಟಿ ವಿವಾದ | ತ್ರಿಶೂರ್ ಗೆ ಆಗಮಿಸಿದ ಸುರೇಶ್ ಗೋಪಿ: ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಕಾರ

ಸುರೇಶ್ ಗೋಪಿ (Photo credit: PTI)
ತ್ರಿಶೂರ್: 2024ರ ಲೋಕಸಭಾ ಚುನಾವಣೆಗೂ ಮುನ್ನ ಮತಪಟ್ಟಿಯಲ್ಲಿ ಅಕ್ರಮ ನಡೆದಿತ್ತು ಎಂಬ ಆರೋಪಗಳು ಬುಗಿಲೆದ್ದಿರುವ ಬೆನ್ನಿಗೇ, ಇಂದು ಬೆಳಗ್ಗೆ ಕೇಂದ್ರ ಸಚಿವ ಸುರೇಶ್ ಗೋಪಿ ತ್ರಿಶೂರ್ ಗೆ ಆಗಮಿಸಿದರು. ಆದರೆ, ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಬಿಗಿ ಭದ್ರತೆ ಏರ್ಪಡಿಸಲಾಗಿದ್ದ ತ್ರಿಶೂರ್ ರೈಲ್ವೆ ನಿಲ್ದಾಣದಲ್ಲಿ ಸುರೇಶ್ ಗೋಪಿ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಇದಾದ ಬಳಿಕ, ಮಂಗಳವಾರ ರಾತ್ರಿ ಬಿಜೆಪಿ-ಸಿಪಿಐ(ಎಂ) ಕಾರ್ಯಕರ್ತರ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಲು ಅವರು ಆಸ್ಪತ್ರೆಗೆ ತೆರಳಿದರು.
ಮತಪಟ್ಟಿ ವಿವಾದ ಭುಗಿಲೆದ್ದ ನಂತರ ಸುರೇಶ್ ಗೋಪಿ ತ್ರಿಶೂರ್ ಗೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ. ಈ ಆರೋಪಗಳ ಕುರಿತು ಸುರೇಶ್ ಗೋಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಮೊದಲೇ ಯಾಕೆ ಈ ಆರೋಪಗಳನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದೆ.





