ನಾಳೆ(ಆ.17)ರಿಂದ ‘ವೋಟರ್ ಅಧಿಕಾರ ಯಾತ್ರಾ’ ಆರಂಭ

ರಾಹುಲ್ಗಾಂಧಿ | PC : X
ಸಸಾರಾಂ,ಆ.16: ಚುನಾವಣಾ ಆಯೋಗದ‘ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ವಿರುದ್ಧ ರಣಕಹಳೆ ಮೊಳಗಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ರವಿವಾರ ‘ವೋಟರ್ ಆಧಿಕಾರ ಯಾತ್ರಾ’ವನ್ನು ಆರಂಭಿಸಲಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷವು ‘ಓರ್ವ ವ್ಯಕ್ತಿಗೆ , ಒಂದು ಮತ’ ಸಿದ್ಧಾಂತಕ್ಕಾಗಿ ಹೋರಾಡುವುದಾಗಿ ಘೋಷಿಸಿದೆ. ವೋಟರ್ ಅಧಿಕಾರ ಯಾತ್ರೆಯು ಒಂದು ಐತಿಹಾಸಿಕ ಪಾದಯಾತ್ರೆಯಾಗಲಿದೆಯಂದು ಹೇಳಿದೆ. ಎಸ್ ಐ ಆರ್ ಪ್ರಜೆಗಳನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿದೆಯೆಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಲೋಕಸಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ ಜೊತೆ, ಆರ್ ಜೆ ಡಿ ಯ ತೇಜಸ್ವಿಯಾದವ್ ಮತ್ತು ಇತರ ಮಹಾಘಟಬಂಧನ್ ಮೈತ್ರಿಕೂಟದ ನಾಯಕರು 16 ದಿನಗಳ ವೋಟರ್ ಅಧಿಕಾರ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. 1,300 ಕಿ.ಮೀ. ವಿಸ್ತೀರ್ಣದ ಈ ಯಾತ್ರೆಯು ಸಸಾರಾಂನಲ್ಲಿ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಸಮಾರೋಪಗೊಳ್ಳಲಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಾಹುಲ್, ‘‘ 16 ದಿನಗಳು, 20ಕ್ಕೂ ಅಧಿಕ ಜಿಲ್ಲೆಗಳು , 1300 ಕಿ.ಮೀ. ವೋಟರ್ ಅಧಿಕಾರ ಯಾತ್ರಾದ ಮೂಲಕ ನಾವು ಜನತೆಯ ಬಳಿಗೆ ಬರುತ್ತಿದ್ದೇವೆ. ಅತ್ಯಂತ ಮೂಲಭೂತ ಪ್ರಜಾತಾಂತ್ರಿಕ ಹಕ್ಕು ಆಗಿರುವ ‘ಓರ್ವ ವ್ಯಕ್ತಿಗೆ ಒಂದು ಮತ’ವನ್ನು ರಕ್ಷಿಸಲು ನಡೆಸುವ ಹೋರಾಟವಾಗಿದೆ. ಸಂವಿಧಾನದ ರಕ್ಷಣೆಗಾಗಿ ಬಿಹಾರದಲ್ಲಿ ನಮ್ಮ ಜೊತೆಗೂಡಿ’ ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ವೋಟರ್ ಅಧಿಕಾರ ಯಾತ್ರೆಯು ಔರಂಗಾಬಾದ್, ಗಯಾ, ನವಾಡ,ನಲಂದಾ, ಶೇಖ್ಪುರ, ಲಖಿಸರಾಯ್, ಮುಂಗೇರ್, ಭಾಗಲ್ಪುರ, ಕಟಿಹಾರ್,ಪೂರ್ನಿಯಾ, ಸುಪಾವುಲ್, ಮಧುಬನಿ, ದರ್ಭಾಂಗ, ಸೀತಾಮಡಿ, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್ಗಂಜ್, ಸಿವಾನ್, ಚಾಪ್ರಾ ಹಾಗೂ ಆರಾ ಜಿಲ್ಲೆಗಳನ್ನು ಹಾದುಹೋಗಲಿದೆ.
ವೋಟರ್ ಅಧಿಕಾರ ಯಾತ್ರಾ ಪೂರ್ಣಗೊಳ್ಳುವವರೆಗೆ ರಾಹುಲ್ ಗಾಂಧಿ ಅವರು ಬಿಹಾರದಲ್ಲಿಯೇ ತಂಗಲಿದ್ದಾರೆಂದು ಕಾಂಗ್ರೆಸ್ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಅವರು ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.







