ಉತ್ತರ ಪ್ರದೇಶ | ಅಯೋಧ್ಯೆಯ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ; ಮತದಾನ ಆರಂಭ

Photo : PTI
ಅಯೋಧ್ಯೆ: ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ಬೆಳಿಗ್ಗೆ ಮತದಾನ ಆರಂಭವಾಯಿತು.
ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿ ಕ್ಷೇತ್ರದ 3,70,829 ಮತದಾರರು ಕಣದಲ್ಲಿರುವ 10 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಸಮಾಜವಾದಿ ಪಕ್ಷದ ಅಜಿತ್ ಪ್ರಸಾದ್ ಮತ್ತು ಬಿಜೆಪಿಯ ಚಂದ್ರಭಾನು ಪಾಸ್ವಾನ್ ನಡುವೆ ನೇರಾ ಹಣಾಹಣಿ ನಿರೀಕ್ಷಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಕೆಲವೇ ತಿಂಗಳುಗಳ ನಂತರ, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಫೈಝಾಬಾದ್ನಿಂದ ಎಸ್ಪಿಯ ಅವಧೇಶ್ ಪ್ರಸಾದ್ ಅವರ ಅನಿರೀಕ್ಷಿತ ಗೆಲುವಿನಿಂದ ಖಾಲಿಯಾಗಿದ್ದ ಅಯೋಧ್ಯೆ ಜಿಲ್ಲೆಯ ಮಿಲ್ಕಿಪುರದ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
210 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮತ್ತು 25 ಕೇಂದ್ರಗಳಲ್ಲಿ ವೀಡಿಯೊಗ್ರಫಿ ಮಾಡಲಾಗುವುದು. 71 ಮತಗಟ್ಟೆಗಳಲ್ಲಿ ಮೈಕ್ರೋ-ವೀಕ್ಷಕರನ್ನು ನಿಯೋಜಿಸಲಾಗಿದ್ದು, ಒಂಬತ್ತು ಫ್ಲೈಯಿಂಗ್ ಸ್ಕ್ವಾಡ್ಗಳು, ಒಂಬತ್ತು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡಗಳು, ಆರು ವಿಡಿಯೋ ಸರ್ವೈಲೆನ್ಸ್ ತಂಡಗಳು, ಎರಡು ಸೂಪರ್ ಝೋನಲ್ ಮ್ಯಾಜಿಸ್ಟ್ರೇಟ್ಗಳು, ನಾಲ್ಕು ಝೋನಲ್ ಮ್ಯಾಜಿಸ್ಟ್ರೇಟ್ಗಳು ಮತ್ತು 41 ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳು ಇದ್ದಾರೆ. ನಾಗರಿಕ ಪೊಲೀಸ್, ಪಿಎಸಿ ಮತ್ತು ಅರೆಸೈನಿಕ ಪಡೆಗಳನ್ನು ಮತದಾನ ನಡೆಯುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
1.93 ಲಕ್ಷಕ್ಕೂ ಹೆಚ್ಚು ಪುರುಷ ಮತದಾರರು, 1.78 ಲಕ್ಷಕ್ಕೂ ಹೆಚ್ಚು ಮಹಿಳಾ ಮತದಾರರು ಮತ್ತು ಎಂಟು ತೃತೀಯ ಲಿಂಗಿಗಳು ಉಪಚುನಾವಣೆಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ 4,811 ಮೊದಲ ಮತದಾರರಿದ್ದಾರೆ.
ಬಿಎಸ್ಪಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್ ತನ್ನ ಮೈತ್ರಿಪಕಷ್ ಎಸ್ಪಿಯನ್ನು ಬೆಂಬಲಿಸುತ್ತಿದೆ. ಆಝಾದ್ ಸಮಾಜ ಪಕ್ಷ (ಕಾನ್ಶಿ ರಾಮ್) ಕೂಡ ಈ ಸ್ಥಾನದಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
.