ಬೀದಿ ನಾಯಿಗಳ ದಾಳಿ: ತೀವ್ರ ಗಾಯಗೊಂಡಿದ್ದ ಉದ್ಯಮಿ ಪರಾಗ್ ದೇಸಾಯಿ ನಿಧನ

ಪರಾಗ್ ದೇಸಾಯಿ (Photo:X/Shaktisinh Gohil)
ಹೊಸದಿಲ್ಲಿ: ವಾಘ್ ಬಕ್ರಿ ಟೀ ಬ್ರಾಂಡ್ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ ಅವರು ತಮ್ಮ 49 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಕ್ಟೋಬರ್ 15 ರಂದು ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಈ ವೇಳೆ ಬಿದ್ದು ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು ಎಂದು ‘ಅಹಮದಾಬಾದ್ ಮಿರರ್’ ವರದಿ ಮಾಡಿದೆ.
ದೇಸಾಯಿ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ವರದಿಯಾಗಿದೆ.
ದೇಸಾಯಿ ಅವರು ಏಳು ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ, ಅಕ್ಟೋಬರ್ 22 ರಂದು ಅಹಮದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಿಗ್ಗೆ 9 ಗಂಟೆಗೆ ಥಾಲ್ತೇಜ್ ಚಿತಾಗಾರದಲ್ಲಿ ನಡೆಸಲಾಯಿತು ಎಂದು ವರದಿ ಹೇಳಿದೆ.
ದೇಸಾಯಿ ಅವರು ವಾಕಿಂಗ್ ಹೋಗಿದ್ದಾಗ ಬೀದಿ ನಾಯಿಗಳಿಂದ ದಾಳಿಗೊಳಗಾಗಿದ್ದು, ನಾಯಿಗಳಿಂದ ತಪ್ಪಿಸಲು ಪ್ರಯತ್ನಿಸುವಾಗ ಕಾಲು ಜಾರಿ ಬಿದ್ದಿದ್ದರು. ಇದರಿಂದಾಗಿ ಅವರ ಮೆದುಳಿಗೆ ಏಟಾಗಿತ್ತು ಎಂದು ಹೇಳಲಾಗಿದೆ.







