ಎನ್ಕೌಂಟರ್ನಲ್ಲಿ ಭೂಗತ ಪಾತಕಿ ರೋಮಿಲ್ ವೊಹ್ರಾ ಸಾವು

Photo : NDTV
ಹೊಸದಿಲ್ಲಿ, ಜೂ. 24: ಹಲವು ಹತ್ಯೆ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಭೂಗತ ಪಾತಕಿ ರೋಮಿಲ್ ವೊಹ್ರಾನನ್ನು ದಿಲ್ಲಿ-ಹರ್ಯಾಣ ಗಡಿಯ ಸಮೀಪ ನಡೆದ ಎನ್ಕೌಂಟರ್ನಲ್ಲಿ ಪೊಲೀಸರು ಹತ್ಯೆಗೈದಿದ್ದಾರೆ.
ಕಾಲಾ ರಾಣಾ ನೋನಿ ರಾಣಾ ಗ್ಯಾಂಗ್ನೊಂದಿಗೆ ಗುರುತಿಸಿಕೊಂಡಿದ್ದ ಶಾರ್ಪ್ ಶೂಟರ್ ರೋಮಿಲ್ ವೊಹ್ರಾ ಹರ್ಯಾಣದ ಯಮುನಾನಗರ್ ಜಿಲ್ಲೆಯಲ್ಲಿ ಜೂನ್ 14ರಂದು ಮದ್ಯದ ದೊರೆ ಶಂತನು ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ.
ವೊಹ್ರಾ ಅಂತರ್ ರಾಜ್ಯ ಗಡಿಯ ಸಮೀಪ ಇರುವ ಕುರಿತು ದಿಲ್ಲಿ ಪೊಲೀಸ್ನ ಬೇಹುಗಾರಿಕೆ ನಿಗ್ರಹ ಘಟಕ ಹರ್ಯಾಣ ಪೊಲೀಸರಿಂದ ಮಾಹಿತಿ ಸ್ವೀಕರಿಸಿತು. ಕೂಡಲೇ ದಿಲ್ಲಿ ಹಾಗೂ ಹರ್ಯಾಣ ಪೊಲೀಸ್ನ ಜಂಟಿ ತಂಡ ಗಡಿ ಪ್ರದೇಶಕ್ಕೆ ತೆರಳಿತು.
ವೊಹ್ರಾನನ್ನು ಮಂಗಳವಾರ ಪತ್ತೆ ಹಚ್ಚಲಾಯಿತು. ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸುತ್ತಿರುವಂತೆ ಆತ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ. ಪೊಲೀಸರು ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿದರು. ಇದರಿಂದ ವೊಹ್ರಾ ಮೃತಪಟ್ಟ. ಗುಂಡಿನ ಕಾಳಗದಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳಾದ ಪ್ರವೀಣ್ ಹಾಗೂ ರೋಹನ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.