ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯುದ್ಧಾಪರಾಧ ಸಂಭವಿಸಿದೆ : ವಿಶ್ವಸಂಸ್ಥೆ ಮಾನವಹಕ್ಕು ಮುಖ್ಯಸ್ಥರ ವರದಿ

ವೋಕರ್ ಟರ್ಕ್ | Photo: X @UNGeneva
ಜಿನೆವಾ : ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಎಲ್ಲಾ ಪಕ್ಷಗಳೂ ಯುದ್ಧಾಪರಾಧ ಎಸಗಿವೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೊಣೆಗಾರರನ್ನು ಗುರುತಿಸಬೇಕು ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.
`ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಮಾನವೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂಘರ್ಷಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಳಿಂದಲೂ ಯುದ್ಧಾಪರಾಧ ಹಾಗೂ ಇತರ ಅಪರಾಧಗಳು ನಡೆದಿವೆ' ಎಂದು ಅವರು ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಹೇಳಿದರು.
ಶಾಂತಿ, ತನಿಖೆ ಮತ್ತು ಹೊಣೆಗಾರಿಕೆ ಗುರುತಿಸಲು ಇದು ಸಕಾಲವಾಗಿದೆ. ಇಸ್ರೇಲ್ ಪಡೆಯಿಂದ ಯುದ್ಧಾಪರಾಧಕ್ಕೆ ಕಾರಣವಾಗಬಲ್ಲ ಹಲವು ಘಟನೆಗಳನ್ನು ವಿಶ್ವಸಂಸ್ಥೆ ಏಜೆನ್ಸಿ ದಾಖಲಿಸಿದೆ. ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಇಸ್ರೇಲಿ ಪಡೆಗಳು ವಿವೇಚನಾರಹಿತ ಅಥವಾ ಅಸಮಾನ ಬಲಪ್ರಯೋಗದಲ್ಲಿ ತೊಡಗಿರುವ ಸೂಚನೆಗಳೂ ಇವೆ. ಹಮಾಸ್ ದಕ್ಷಿಣ ಇಸ್ರೇಲ್ನಾದ್ಯಂತ ನಡೆಸಿದ ವಿವೇಚನಾರಹಿತ ದಾಳಿ ಹಾಗೂ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದೂ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ' ಎಂದು ಟರ್ಕ್ ಹೇಳಿದ್ದಾರೆ.
ಸುಮಾರು 1.5 ದಶಲಕ್ಷ ಜನರಿರುವ ದಕ್ಷಿಣದ ಗಡಿಭಾಗದ ರಫಾ ನಗರದಲ್ಲಿ ಇಸ್ರೇಲ್ನ ಪದಾತಿ ದಳ ನಡೆಸುತ್ತಿರುವ ಕಾರ್ಯಾಚರಣೆ ಬೃಹತ್ ಪ್ರಮಾಣದ ಜೀವಹಾನಿಗೆ ಕಾರಣವಾಗಲಿದೆ. ಅಂತಹ ಆಕ್ರಮಣವು ದೌರ್ಜನ್ಯದ ಅಪರಾಧವನ್ನು ಹೆಚ್ಚಿಸುತ್ತದೆ ಮತ್ತು ಇನ್ನಷ್ಟು ಜನ ನೆಲೆ ಕಳೆದುಕೊಳ್ಳಲಿದ್ದಾರೆ ಮತ್ತು ಪರಿಣಾಮಕಾರಿ ಮಾನವೀಯ ನೆರವಿನ ಯಾವುದೇ ಭರವಸೆಯ ಮೇಲಿನ ಡೆತ್ ವಾರಾಂಟ್ ಆಗಲಿದೆ' ಎಂದು ಟರ್ಕ್ ಎಚ್ಚರಿಕೆ ನೀಡಿದ್ದಾರೆ.







