ಯುದ್ಧನೌಕೆ ಐಎನ್ಎಸ್ ಇಂಫಾಲಕ್ಕೆ ಚಾಲನೆ
Photo: PTI
ಹೊಸದಿಲ್ಲಿ: ಭಾರತೀಯ ನೌಕಾಪಡೆಯು ಮಂಗಳವಾರ ತನ್ನ ನೂತನ ಕ್ಷಿಪಣಿ ನಾಶಕ ನೌಕೆ ‘ಐಎನ್ಎಸ್ ಇಂಫಾಲ’ಕ್ಕೆ ಮುಂಬೈಯ ನ್ಯಾವಲ್ ಡಾಕ್ಯಾರ್ಡ್ನಲ್ಲಿ ಚಾಲನೆ ನೀಡಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿಯ ಹಿನ್ನೆಲೆಯಲ್ಲಿ, ತನ್ನ ಸಾಗರ ತೀರ ಗಸ್ತನ್ನು ಬಲಗೊಳಿಸುವುದಕ್ಕಾಗಿ ‘ಇಂಫಾಲ’ವನ್ನು ಕಾರ್ಯಾಚರಣೆಗೆ ಇಳಿಸಲಾಗುತ್ತಿದೆ.
ರಕ್ಷಣಾ ಸಚಿವ ರಾಜನಾಥ್ಸಿಂಗ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು.
ಈಶಾನ್ಯ ಭಾರತದ ನಗರವೊಂದರ ಹೆಸರನ್ನು ಭಾರತೀಯ ಯುದ್ಧ ನೌಕೆಯೊಂದಕ್ಕೆ ಇಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 2019ರ ಎಪ್ರಿಲ್ ನಲ್ಲಿ ರಾಷ್ಟ್ರಪತಿ ಇದಕ್ಕೆ ಅನುಮೋದನೆ ನೀಡಿದ್ದರು.
ಮಣಿಪುರದ ರಾಜಧಾನಿಯ ಹೆಸರನ್ನು ಯುದ್ಧನೌಕೆಯೊಂದಕ್ಕೆ ಇಟ್ಟಿರುವುದು ರಾಷ್ಟ್ರೀಯ ಭದ್ರತೆ ಮತ್ತು ಸಮೃದ್ಧಿಯಲ್ಲಿ ಈಶಾನ್ಯ ವಲಯ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದೆ.
ಬಂದರು ಮತ್ತು ಸಮುದ್ರದಲ್ಲಿ ಕಠಿಣ ಹಾಗೂ ಸಮಗ್ರ ಪರೀಕ್ಷೆಗೆ ಒಳಪಡಿಸಿದ ಬಳಿಕ ಐಎನ್ಎಸ್ ಇಂಫಾಲ ಯುದ್ಧನೌಕೆಯನ್ನು ಅಕ್ಟೋಬರ್ 20ರಂದು ಭಾರತೀಯ ನೌಕಾಪಡೆಗೆ ಒಪ್ಪಿಸಲಾಗಿತ್ತು.
ಬಳಿಕ ನವೆಂಬರ್ ನಲ್ಲಿ, ಯುದ್ದನೌಕೆಯು ವಿಸ್ತೃತ ವ್ಯಾಪ್ತಿಯ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವಿ ಪ್ರಾಯೋಗಿಕ ಉಡಾವಣೆ ನಡೆಸಿದೆ. ಕಾರ್ಯಾಚರಣೆಗೆ ಇಳಿಯುವುದಕ್ಕೂ ಮುನ್ನ ಸ್ವದೇಶಿ ನಿರ್ಮಿತ ಯುದ್ಧನೌಕೆಯೊಂದು ಇಂಥ ಪ್ರಾಯೋಗಿಕ ಉಡಾವಣೆ ನಡೆಸಿರುವುದು ಇದೇ ಮೊದಲು.
ಇನ್ನು ಐಎನ್ಎಸ್ ಇಂಫಾಲವು ಪಶ್ಚಿಮ ನೌಕಾ ಕಮಾಂಡ್ ಗೆ ಸೇರ್ಪಡೆಗೊಳ್ಳಲಿದೆ.
164 ಮೀಟರ್ ಉದ್ದದ 7,400 ಟನ್ ಸಾಮರ್ಥ್ಯದ ನೌಕೆ
164 ಮೀಟರ್ ಉದ್ದದ ‘ಇಂಫಾಲ’ ಯುದ್ಧ ನೌಕೆಯು 7,400 ಟನ್ ಸಾಮರ್ಥ್ಯವನ್ನು ಹೊಂದಿದೆ. ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು, ನೌಕಾ ನಿಗ್ರಹ ಕ್ಷಿಪಣಿಗಳು ಮತ್ತು ಟಾರ್ಪೆಡೋಸ್ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್ಗಳನ್ನು ಅದು ಹೊಂದಿದೆ.
ಕಂಬೈನ್ಡ್ ಗ್ಯಾಸ್ ಆ್ಯಂಡ್ ಗ್ಯಾಸ್ (ಸಿಒಜಿಎಜಿ) ಪ್ರೊಪಲ್ಶನ್ ಇಂಜಿನ್ ಹೊಂದಿರುವ ನೌಕೆಯು 30 ನಾಟ್ (ಗಂಟೆಗೆ 56 ಕಿ.ಮೀ.)ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಬ್ರಹ್ಮೋಸ್ ಕ್ಷಿಪಣಿಗಳು, ಮಧ್ಯಮ ವ್ಯಾಪ್ತಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು, ದೇಶಿ ನಿರ್ಮಿತ ಸಬ್ಮರೀನ್ ನಿಗ್ರಹ ರಾಕೆಟ್ ಉಡಾವಕಗಳು ಮತ್ತು 76 ಎಮ್ಎಮ್ ಸೂಪರ್ ರ್ಯಾಪಿಡ್ ಗನ್ ಮೌಂಟ್ ಸೇರಿದಂತೆ ನೌಕೆಯಲ್ಲಿರುವ ಸುಮಾರು 75 ಶೇಕಡ ಪರಿಕರಗಳು ಸ್ವದೇಶಿ ನಿರ್ಮಿತವಾಗಿವೆ.