ಎನ್ಸಿಪಿಯನ್ನು ವಿಲೀನಗೊಳಿಸಲು ಬಯಸಿದ್ದ ಅಜಿತ್ ಪವಾರ್?; ಆಪ್ತರು ಹೇಳುವುದೇನು?

ಅಜಿತ್ ಪವಾರ್ (Photo: PTI)
ಮುಂಬೈ: ಸಾವಿಗೂ ಮುನ್ನ ಅಜಿತ್ ಪವಾರ್ ಎನ್ಸಿಪಿಯನ್ನು ವಿಲೀನಗೊಳಿಸಲು ಬಯಸಿದ್ದರೆ? ಎಂಬ ಪ್ರಶ್ನೆಗೆ ಅವರ ಆಪ್ತರೊಬ್ಬರು, "ಅವರು ಶೇ.100ರಷ್ಟು ಉತ್ಸುಕರಾಗಿದ್ದರು" ಎಂದು ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರದ ಮಹಾಯುತಿ ಸರಕಾರದಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಜೊತೆ ಅಜಿತ್ ಪವಾರ್ ಎರಡನೆ ಅತ್ಯಂತ ಶಕ್ತಿಶಾಲಿ ನಾಯಕರಾಗಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಎನ್ಸಿಪಿಯ ಎರಡು ಬಣಗಳನ್ನು ಒಗ್ಗೂಡಿಸಲು ಅಜಿತ್ ಪವಾರ್ ಪ್ರಯತ್ನಿಸಿದ್ದರೇ? ಎಂಬ ಪ್ರಶ್ನೆಗೆ, ಅವರ ಅಪ್ತರು, ಅವರು ಉತ್ಸುಕರಾಗಿದ್ದರು ಎಂದು ಉತ್ತರಿಸಿದ್ದಾರೆ.
ತಮ್ಮ ಹಾಗೂ ತಮ್ಮ ಸೋದರ ಮಾವ ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣಗಳನ್ನು ಒಗ್ಗೂಡಿಸಲು ಅಜಿತ್ ಪವಾರ್ ಉತ್ಸುಕರಾಗಿದ್ದರು ಎಂದು ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನನಗೆ ಈ ಸಂಗತಿಯನ್ನು ಅವರು ವಿಮಾನ ಅಪಘಾತಕ್ಕೀಡಾಗುವುದಕ್ಕೂ ಕೆಲವೇ ದಿನಗಳ ಮುನ್ನ ಗೋಪ್ಯವಾಗಿ ತಿಳಿಸಿದ್ದರು" ಎಂದು 1980ರ ಮಧ್ಯಭಾಗದಲ್ಲಿ ಅಜಿತ್ ಪವಾರ್ ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೆ ಮುಂಚಿನಿಂದಲೂ ಬಲ್ಲ ಅವರ ದೀರ್ಘಕಾಲೀನ ಸಹಚರ ಕಿರಣ್ ಗುರ್ಜಾರ್ ತಿಳಿಸಿದ್ದಾರೆ.







