ವಯನಾಡ್ | ಪ್ರಿಯಾಂಕಾ ಗಾಂಧಿ ಗೆಲುವು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಲೇರಿದ ಬಿಜೆಪಿ ಅಭ್ಯರ್ಥಿ

ಪ್ರಿಯಾಂಕಾಗಾಂಧಿ | PC : PTI
ತಿರುವನಂತಪುರ: ವಯನಾಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ನವ್ಯ ಹರಿದಾಸ್ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾಗಾಂಧಿ ವಾದ್ರಾ ಅವರಿಗೆ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೆಲವೊಂದು ಮಹತ್ವದ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದುದರಿಂದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಗೆಲುವನ್ನು ಅಸಿಂಧುಗೊಳಿಸಬೇಕೆಂದು ಕೋರಿ ನವ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಿಯಾಂಕಾಗಾಂಧಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಹಾಗೂ ಭ್ರಷ್ಟಾಚಾರವನ್ನು ಎಸಗಿದ್ದಾರೆಂದು ಆಕೆ ಅರ್ಜಿಯಲ್ಲಿ ಆಪಾದಿಸಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಅವರು ನವ್ಯಾ ಹರಿದಾಸ್ ಅವರನ್ನು 5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಬಾಬು ಅವರು ಸಮನ್ಸ್ ಜಾರಿಗೊಳಿಸಿದ್ದಾರೆ ಹಾಗೂ ಆಗಸ್ಟ್ನಲ್ಲಿ ವಿಚಾರಣೆಯನ್ನು ನಿಗದಿಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾಗಾಂಧಿ ಅವರು ನಾಮಪತ್ರ ಸಲ್ಲಿಸುವಾಗ ಆಕೆಯ ಹಾಗೂ ಆಕೆಯ ಕುಟುಂಬದ ಒಡೆತನದಲ್ಲಿರುವ ಆಸ್ತಿಪಾಸ್ತಿಗಳ ಕುರಿತಾದ ನಿರ್ಣಾಯಕ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಆದುದರಿಂದ ಅವರ ಚುನಾವಣಾ ಗೆಲುವನ್ನು ಅಸಿಂಧುಗೊಳಿಸಬೇಕೆಂದು ನವ್ಯಾ ಪರವಾಗಿ ಅರ್ಜಿ ಸಲ್ಲಿಸಿರುವ ನ್ಯಾಯವಾದಿ ಹರಿಕುಮಾರ್ ಜಿ. ನಾಯರ್ ಅವರು ಆಗ್ರಹಿಸಿದ್ದಾರೆ