ಪುನರ್ವಸತಿ ಪ್ರಕ್ರಿಯೆ ವಿಳಂಬ ಖಂಡಿಸಿ ವಯನಾಡ್ ಭೂಕುಸಿತ ಸಂತ್ರಸ್ತರಿಂದ ಪ್ರತಿಭಟನೆ

ಸಾಂದರ್ಭಿಕ ಚಿತ್ರ | PC : PTI
ವಯನಾಡ್: ಕಳೆದ ವರ್ಷ ವಯನಾಡ್ನಲ್ಲಿ ನಡೆದ ಭೀಕರ ಭೂಕುಸಿತ ಸಂತ್ರಸ್ತರ ಪುನರ್ವಸತಿಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಸಂತ್ರಸ್ತರು ರವಿವಾರ ಜಿಲ್ಲೆಯ ಚೂರಲ್ಮಲದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅದೇ ವೇಳೆ, ಮೆರವಣಿಗೆಯನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಏರ್ಪಟ್ಟಿತು.
ಪ್ರತಿಭಟನಾಕಾರರು ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸುವುದರೊಂದಿಗೆ ಪ್ರತಿಭಟನೆ ಆರಂಭಗೊಂಡಿತು. ಬಳಿಕ, ಪ್ರತಿಭಟನಾ ಮೆರವಣಿಗೆಯನ್ನು ಚೂರಲ್ಮಲದಲ್ಲಿರುವ ಬೇಲಿ ಸೇತುವೆಯ ಸಮೀಪ ಪೊಲೀಸರು ತಡೆದರು.
ಜನ ಶಬ್ದಮ್ ಕ್ರಿಯಾ ಸಮಿತಿ ಎಂಬ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಿತ್ತು.ಆದರೆ, ಭೂಕುಸಿತ ಪೀಡಿತ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ನಡುವೆ, ವಯನಾಡ್ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೋಮವಾರ ಉಪವಾಸ ಮುಷ್ಕರ ನಡೆಸಲಾಗುವುದು ಎಂದು ಜನಕೀಯ ಕ್ರಿಯಾ ಸಮಿತಿ ಘೋಷಿಸಿದೆ.
ತಮಗೆ ಬೇಗನೇ ಪುನರ್ವಸತಿ ಕಲ್ಪಿಸಬೇಕು ಮತ್ತು ಈಗಾಗಲೇ ನೀಡಲಾಗಿರುವ ಐದು ಸೆಂಟ್ಸ್ ಜಮೀನಿಗೆ ಹೆಚ್ಚುವರಿಯಾಗಿ, ಕೇಂದ್ರ ಸರಕಾರವು ಸಮಗ್ರ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಚೂರಲ್ಮಲ ಮುಂಡಕ್ಕೈ ಭೂಕುಸಿತ ಪುನರ್ವಸತಿಗೆ ಸಂಬಂಧಿಸಿ ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ಎರಡನೇ ಪಟ್ಟಿಯಲ್ಲಿ 81 ಕುಟಂಬಗಳ ಹೆಸರುಗಳಿವೆ. ಇದರೊಂದಿಗೆ ಪುನರ್ವಸತಿ ಪಟ್ಟಿಗೆ ಸೇರ್ಪಡೆಗೊಂಡಿರುವ ಕುಟುಂಬಗಳ ಒಟ್ಟು ಸಂಖ್ಯೆ 323ಕ್ಕೆ ಏರಿದೆ.
ಭೂಕುಸಿತದಿಂದಾಗಿ ವಾಸಯೋಗ್ಯವಲ್ಲದ ಮನೆಗಳ ಸದಸ್ಯರನ್ನು ಪುನರ್ವಸತಿ ಪಟ್ಟಿಗೆ ಸೇರಿಸಲಾಗಿದೆ. ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಘೋಷಿಸಿದ ಬಳಿಕ ಶನಿವಾರ ರಾತ್ರಿ ಎರಡನೇ ಪುನರ್ವಸತಿ ಪಟ್ಟಿಯನ್ನು ಪ್ರಕಟಿಸಲಾಯಿತು.







