ವಯನಾಡ್ ದುರಂತ | ಮಲಪ್ಪುರಂ ಚಾಲಿಯಾರ್ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು

PC : PTI
ಮೆಪ್ಪಾಡಿ : ವಯನಾಡ್ ಭೂಕುಸಿತದಲ್ಲಿ ಸಿಲುಕಿದ ಸುಮಾರು 26 ಮಂದಿಯ ಮೃತದೇಹಗಳು ಮಲಪ್ಪುರಂನ ಚಾಲಿಯಾರ್ ನದಿಯ ವಿವಿಧ ಭಾಗಗಳಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಕೈ, ಕಾಲು ಹಾಗೂ ತಲೆಗಳನ್ನು ಕಳೆದುಕೊಂಡ ಮೃತದೇಹಗಳು ನದಿ ತಟದಲ್ಲಿ ಪತ್ತೆಯಾಗಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಉಂಟು ಮಾಡಿದೆ. ಇವುಗಳಲ್ಲಿ 3 ವರ್ಷದ ಮಗುವಿನ ಮೃತದೇಹ ಕೂಡ ಒಳಗೊಂಡಿದೆ.
ಚೆಲಿಯಾರ್ ನದಿಯ ಇರುಟ್ಟುಕುತಿ, ಪೊತ್ತುಕಲ್ಲು, ಪನಮಕಾಯಂ ಹಾಗೂ ಭೂದಾನಂ ಪ್ರದೇಶದಲ್ಲಿ ಮೃತದೇಹಗಳು ಕಂಡು ಬಂದಿವೆ. ನೆರೆಯಲ್ಲಿ ತೇಲಿಕೊಂಡು ಬಂದ 5 ಮೃತದೇಹಗಳು ಕಾಡಿನಲ್ಲಿ ಕಂಡು ಬಂದಿವೆ ಎಂದು ಕುಂಬಿಲಪಾರಾ ಕಾಲನಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರು ತಿಳಿಸಿದ್ದಾರೆ. ಪತ್ತೆಯಾದ ಮೃತದೇಹಗಳನ್ನು ಶವಾಗಾರಕ್ಕೆ ವರ್ಗಾಯಿಸಲಾಗಿದೆ.
ಚೆಲಿಯಾರ್ ನದಿಯಲ್ಲಿ ಪತ್ತೆಯಾದ ತೇಲುತ್ತಿರುವ ಮೃತದೇಹಗಳು ವಯನಾಡ್ ಭೂಕುಸಿತದಲ್ಲಿ ಸಿಲುಕಿಕೊಂಡವರದ್ದು ಎಂಬುದನ್ನು ಶಾಸಕ ಐ.ಸಿ. ಬಾಲಕೃಷ್ಣನ್ ದೃಢಪಡಿಸಿದ್ದಾರೆ. ಭೂಕುಸಿತ ಸಂಭವಿಸಿದ ಮುಂಡುಕೈಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಎಂದು ಅವರು ತಿಳಿಸಿದ್ದಾರೆ. ಮುಂಡಕೈಯ ಪರಿಸ್ಥಿತಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಶೋಚನೀಯವಾಗಿದೆ ಎಂದು ಕಲ್ಪೆಟ್ಟಾ ಶಾಸಕ ಟಿ. ಸಿದ್ದೀಕ್ ತಿಳಿಸಿದ್ದಾರೆ.





