ನಮಗೆ ವಿಜಯದಲ್ಲಿ ನಂಬಿಕೆಯಿದೆ : ನೊಬೆಲ್ ವಿಜೇತೆ ನರ್ಗಿಸ್ ಮುಹಮ್ಮದಿಯವರ ಮಕ್ಕಳು
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಂಧನದಲ್ಲಿರುವ ತಾಯಿಯನ್ನು ಪ್ರತಿನಿಧಿಸಲಿರುವ ಅಲಿ ಮತ್ತು ಕಿಯಾನಾ
![ನಮಗೆ ವಿಜಯದಲ್ಲಿ ನಂಬಿಕೆಯಿದೆ : ನೊಬೆಲ್ ವಿಜೇತೆ ನರ್ಗಿಸ್ ಮುಹಮ್ಮದಿಯವರ ಮಕ್ಕಳು ನಮಗೆ ವಿಜಯದಲ್ಲಿ ನಂಬಿಕೆಯಿದೆ : ನೊಬೆಲ್ ವಿಜೇತೆ ನರ್ಗಿಸ್ ಮುಹಮ್ಮದಿಯವರ ಮಕ್ಕಳು](https://www.varthabharati.in/h-upload/2023/12/10/1221155-whatsapp-image-2023-12-10-at-43634-pm.webp)
Photo: NDTV
ಒಸ್ಲೊ (ನಾರ್ವೆ): ನೊಬೆಲ್ ಶಾಂತಿ ಪ್ರಶಸ್ತಿಯನ್ನು ರವಿವಾರ ಇಲ್ಲಿ ನರ್ಗಿಸ್ ಮುಹಮ್ಮದಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಪ್ರದಾನಿಸಲಾಗುವುದು. ಪ್ರಸ್ತುತ ಜೈಲಿನಲ್ಲಿರುವ ನರ್ಗಿಸ್ ರನ್ನು ಅವರ ಮಕ್ಕಳು ಪ್ರತಿನಿಧಿಸಲಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ನರ್ಗಿಸ್ ಇರಾನಿನಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿರುವ ಹಿಜಾಬ್ ಧಾರಣೆ ಮತ್ತು ಮರಣ ದಂಡನೆಯ ಕಡುವಿರೋಧಿಯಾಗಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಅವರನ್ನು ಹಲವಾರು ಬಾರಿ ಬಂಧಿಸಿ ಶಿಕ್ಷೆಗೊಳಪಡಿಸಲಾಗಿದೆ.
ನರ್ಗಿಸ್ 2021ರಿಂದಲೂ ಟೆಹರಾನಿನ ಎವಿನ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಇದೇ ಕಾರಣದಿಂದ ರವಿವಾರ ಸ್ಥಳೀಯ ಸಮಯ ಅಪರಾಹ್ನ ಒಂದು ಗಂಟೆಗೆ ಒಸ್ಲೊ ಸಿಟಿ ಹಾಲ್ ನಲ್ಲಿ ಆಯೋಜಿಸಲಾಗಿರುವ ವರ್ಣರಂಜಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಿಲ್ಲ. ಬದಲಿಗೆ ಅವರ 17ರ ಹರೆಯದ ಅವಳಿ ಮಕ್ಕಳಾದ ಅಲಿ ಮತ್ತು ಕಿಯಾನಿ ತಾಯಿಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು, ನರ್ಗಿಸ್ ತನ್ನ ಜೈಲುಕೋಣೆಯಿಂದ ರಹಸ್ಯವಾಗಿ ರವಾನಿಸಿರುವ ಭಾಷಣವನ್ನು ಓದಲಿದ್ದಾರೆ.
ನರ್ಗಿಸ್ ಕುಟುಂಬದ ಪ್ರಕಾರ ಅವರು ಇದೇ ವೇಳೆ ಬಹಾಯಿ ಸಮುದಾಯದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ.
ತಮ್ಮ ಸಮುದಾಯವು ಸಮಾಜದ ಹಲವು ಕ್ಷೇತ್ರಗಳಲ್ಲಿ ತಾರತಮ್ಯಕ್ಕೆ ಗುರಿಯಾಗಿದೆ ಎಂದು ಇರಾನಿನ ಅತ್ಯಂತ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಗುಂಪಾಗಿರುವ ಬಹಾಯಿ ಸಮುದಾಯದ ಪ್ರತಿನಿಧಿಗಳು ಹೇಳಿದರು.
ಅನಾರೋಗ್ಯದಿಂದ ಬಳಲುತ್ತಿರುವ ನರ್ಗಿಸ್ ಕಳೆದ ನವಂಬರ್ನಲ್ಲಿ ಹಿಜಾಬ್ ಧರಿಸದೆ ಆಸ್ಪತ್ರೆಗೆ ದಾಖಲಾಗುವ ಹಕ್ಕನ್ನು ಪಡೆಯಲು ಹಲವಾರು ದಿನಗಳ ಕಾಲ ಉಪವಾಸ ಮುಷ್ಕರವನ್ನು ನಡೆಸಿದ್ದರು.
‘ಮಹಿಳೆ,ಜೀವನ,ಸ್ವಾತಂತ್ರ್ಯ’ ಆಂದೋಲನದ ಮುಂಚೂಣಿಯಲ್ಲಿರುವ ಮಹಿಳೆಯರಲ್ಲಿ ನರ್ಗಿಸ್ ಓರ್ವರಾಗಿದ್ದಾರೆ. ಆಂದೋಲನದ ಭಾಗವಾಗಿ ಮಹ್ಸಾ ಅಮಿನಿ (22) ಅವರ ಸಾವನ್ನು ವಿರೋಧಿಸಿ ತಿಂಗಳುಗಟ್ಟಲೆ ಕಾಲ ಪ್ರತಿಭಟನೆಗಳು ನಡೆದಿದ್ದವು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 551 ಪ್ರತಿಭಟನಾಕಾರರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದು,ಸಾವಿರಾರು ಜನರು ಬಂಧನಕ್ಕೊಳಗಾಗಿದ್ದರು.
ಇರಾನಿಯನ್-ಕುರ್ದಿಷ್ ಅಮಿನಿ ಮಹಿಳೆಯರಿಗಾಗಿ ಇರಾನಿನ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯ ಉಲ್ಲಂಘನೆಯ ಆರೋಪದಲ್ಲಿ ದೇಶದ ಧಾರ್ಮಿಕ ಪೋಲಿಸರ ವಶದಲ್ಲಿರುವಾಗಲೇ 2022, ಸೆ.16ರಂದು ನಿಧನರಾಗಿದ್ದರು.
‘ಅಮೂಲ್ಯ’ ಸ್ವಾತಂತ್ರ್ಯಗಳು
2015ರಿಂದಲೂ ದೇಶಭ್ರಷ್ಟರಾಗಿ ಫ್ರಾನ್ಸ್ ನಲ್ಲಿ ವಾಸವಾಗಿರುವ ನರ್ಗಿಸ್ರ ಅವಳಿ ಮಕ್ಕಳು ಸುಮಾರು ಒಂಭತ್ತು ವರ್ಷಗಳಿಂದ ತಮ್ಮ ತಾಯಿಯನ್ನು ನೋಡಿಯೇ ಇಲ್ಲ, ಎಂದಾದರೂ ನೋಡುತ್ತೇವೆಯೇ ಎನ್ನುವುದೂ ಅವರಿಗೆ ಗೊತ್ತಿಲ್ಲ. ಅಲಿಗೆ ಈ ಬಗ್ಗೆ ವಿಶ್ವಾಸವಿದೆ, ಆದರೆ ಕಿಯಾನಾಗೆ ಅನುಮಾನವಿದೆ.
‘ಮಹಿಳೆ,ಜೀವನ,ಸ್ವಾತಂತ್ರ್ಯ’ಹೋರಾಟದ ಕುರಿತು ಹೇಳುವುದಾದರೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಇವು ನಿಮ್ಮನ್ನೇ ತ್ಯಾಗ ಮಾಡಲು ಮತ್ತು ನಿಮ್ಮ ಜೀವನವನ್ನೇ ಅವುಗಳಿಗೆ ಅರ್ಪಿಸಲು ಯೋಗ್ಯವಾಗಿವೆ. ಏಕೆಂದರೆ ಅಂತಿಮವಾಗಿ ಈ ಮೂರೂ ಅಮೂಲ್ಯವಾಗಿವೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಯಾನಾ ಹೇಳಿದರು.
‘ಒಂದಲ್ಲೊಂದು ದಿನ ತಾಯಿಯನ್ನು ನೋಡಲು ಸಾಧ್ಯವಾಗುವುದೇ? ಈ ಬಗ್ಗೆ ನಾನು ವೈಯಕ್ತಿಕವಾಗಿ ನಿರಾಶಾವಾದಿಯಾಗಿದ್ದೇನೆ ’ ಎಂದ ಕಿಯಾನಾ, ನೊಬೆಲ್ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ತನ್ನ ತಾಯಿ ಹೆಚ್ಚಿನ ಗಮನವನ್ನು ಸೆಳೆದಿದ್ದು, ಇದು ಇರಾನ್ ಅಧಿಕಾರಿಗಳು ಆಕೆಯ ಸ್ವಾತಂತ್ರ್ಯವನ್ನು ಇನ್ನಷ್ಟು ಮೊಟಕುಗೊಳಿಸಲು ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
‘ಬಹುಶಃ ಇನ್ನೊಂದು 30-40 ವರ್ಷಗಳಲ್ಲಿ ನಾನು ತಾಯಿಯನ್ನು ನೋಡಬಹುದೇನೋ...ಗೊತ್ತಿಲ್ಲ. ಆದರೆ ನಾನೆಂದಾದರೂ ಆಕೆಯನ್ನು ನೋಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿಲ್ಲ. ಹಾಗಿದ್ದರೂ ಸರಿಯೇ, ಏಕೆಂದರೆ ನನ್ನ ತಾಯಿ ಯಾವಾಗಲೂ ನನ್ನ ಹೃದಯದಲ್ಲಿ ಮತ್ತು ನನ್ನ ಕುಟುಂಬದೊಂದಿಗೆ ಇರುತ್ತಾಳೆ’ ಎಂದು ಕಿಯಾನಾ ನುಡಿದರು.
ಇದಕ್ಕೆ ವ್ಯತಿರಿಕ್ತವಾಗಿ ಅಲಿ,‘ಬಹುಶಃ ಎರಡು,ಐದು ಅಥವಾ ಹತ್ತು ವರ್ಷಗಳಲ್ಲಿ ನಮ್ಮ ಭೇಟಿ ಸಾಧ್ಯವಾಗದಿದ್ದರೂ ಒಂದಲ್ಲೊಂದು ದಿನ ನನ್ನ ತಾಯಿಯನ್ನು ನೋಡುತ್ತೇನೆ, ಈ ವಿಷಯದಲ್ಲಿ ನಾನು ತುಂಬ ಆಶಾವಾದಿಯಾಗಿದ್ದೇನೆ. ನಾನು ವಿಜಯದಲ್ಲಿ ನಂಬಿಕೆಯನ್ನು ಹೊಂದಿದ್ದೇನೆ ’ಎಂದರು. ಗೆಲುವು ಸುಲಭವಲ್ಲ,ಆದರೆ ಅದು ಖಚಿತ ಎಂದು ತನ್ನ ತಾಯಿಯನ್ನು ಉಲ್ಲೇಖಿಸಿ ಅಲಿ ಹೇಳಿದರು.
ಇರಾನ್ ತೊರೆಯಲು ನಿಷೇಧ
ಅಕ್ಟೋಬರ್ನಲ್ಲಿ ಐರೋಪ್ಯ ಒಕ್ಕೂಟವು ಅಮಿನಿ ಮತ್ತು ಅವರ ಸಾವಿನಿಂದ ಪ್ರೇರಿತ ಜಾಗತಿಕ ಆಂದೋಲನಕ್ಕೆ ತನ್ನ ಅತ್ಯುನ್ನತ ಮಾನವ ಹಕ್ಕುಗಳ ಪುರಸ್ಕಾರ ‘ಸಖರೋವ್ ಪ್ರಶಸ್ತಿ’ಯನ್ನು ಘೋಷಿಸಿತ್ತು.
ಡಿ.13ರಂದು ಐರೋಪ್ಯ ಸಂಸತ್ತಿನಲ್ಲಿ ಮರಣೋತ್ತರ ಸಖರೋವ್ ಪ್ರಶಸ್ತಿಯನ್ನು ಸ್ವೀಕರಿಸಬೇಕಿದ್ದ ಅಮಿನಿಯವರ ಹೆತ್ತವರು ಮತ್ತು ಸಹೋದರ ಇರಾನ್ ತೊರೆಯುವುದನ್ನು ನಿಷೇಧಿಸಲಾಗಿದೆ ಎಂದು ಅಮಿನಿ ಕುಟುಂಬದ ವಕೀಲರು ಶನಿವಾರ ತಿಳಿಸಿದರು.
ನರ್ಗಿಸ್ ನೊಬೆಲ್ ಪ್ರಶಸ್ತಿಯ 120 ವರ್ಷಕ್ಕೂ ಹೆಚ್ಚಿನ ಇತಿಹಾಸದಲ್ಲಿ ಬಂಧನದಲ್ಲಿದ್ದೇ ಪುರಸ್ಕಾರವನ್ನು ಸ್ವೀಕರಿಸುತ್ತಿರುವ ಐದನೇ ವ್ಯಕ್ತಿಯಾಗಿದ್ದಾರೆ.