ನಮ್ಮನ್ನು ಬೆತ್ತಲೆಗೊಳಿಸಿ ತಲೆ ಕೆಳಗಾಗಿ ನೇತು ಹಾಕಲಾಗಿತ್ತು: ಇಂದೋರ್ ಅನಾಥಾಶ್ರಮದಲ್ಲಿನ ಮಕ್ಕಳ ಆರೋಪ
ಸಾಂದರ್ಭಿಕ ಚಿತ್ರ
ಇಂದೋರ್ (ಮಧ್ಯ ಪ್ರದೇಶ): ಸಿಬ್ಬಂದಿಗಳಿಂದ ತಮ್ಮ ಮೇಲೆ ಭೀಕರ ದೌರ್ಜನ್ಯ ಮತ್ತು ಚಿತ್ರಹಿಂಸೆಯ ಕುರಿತು ಇಂದೋರ್ ನಲ್ಲಿಯ ಅನಾಥಾಶ್ರಮದಲ್ಲಿನ 21 ಮಕ್ಕಳು ಆರೋಪಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಯು ಕಳೆದ ವಾರ ಆಶ್ರಮದಲ್ಲಿ ದಿಢೀರ್ ತಪಾಸಣೆಯನ್ನು ನಡೆಸಿದ ಬಳಿಕ ಅಲ್ಲಿಯ ಮಕ್ಕಳು ಅನುಭವಿಸುತ್ತಿದ್ದ ಭಯಾನಕತೆ ಬಯಲಾಗಿದೆ.
ಸಣ್ಣಪುಟ್ಟ ತಪ್ಪುಗಳಿಗೂ ಸಿಬ್ಬಂದಿಗಳು ತಮಗೆ ಚಿತ್ರಹಿಂಸೆ ನೀಡುತ್ತಾರೆ. ತಮ್ಮನ್ನು ತಲೆ ಕೆಳಗಾಗಿ ನೇತು ಹಾಕುತ್ತಿದ್ದಾರೆ, ಕಾಯಿಸಿದ ಕಬ್ಬಿಣದಿಂದ ಬರೆ ಹಾಕುತ್ತಿದ್ದಾರೆ ಮತ್ತು ತಮ್ಮನ್ನು ಬೆತ್ತಲೆಗೊಳಿಸಿ ಬಳಿಕ ಚಿತ್ರಗಳನ್ನು ತೆಗೆಯುತ್ತಾರೆ ಎಂದು ಮಕ್ಕಳು ಅಧಿಕಾರಿಗಳಿಗೆ ತಿಳಿಸಿದ್ದಾಗಿ ಪೋಲಿಸರು ಹೇಳಿದರು. ಮಕ್ಕಳು ಬೆಂಕಿಯಲ್ಲಿ ಉರಿಯುತ್ತಿರುವ ಕೆಂಪು ಮೆಣಸಿನಕಾಯಿಯ ಹೊಗೆಯನ್ನು ಉಸಿರಾಡುವಂತೆಯೂ ಮಾಡಲಾಗುತ್ತಿತ್ತು.
ಸಿಡಬ್ಲ್ಯುಸಿ ದೂರಿನ ಮೇರೆಗೆ ಅನಾಥಾಶ್ರಮದ ಐವರು ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಾಲ್ಕು ವರ್ಷದ ಮಗು ತನ್ನ ಚಡ್ಡಿಯಲ್ಲೇ ಮಲ ವಿಸರ್ಜಿಸಿದ ಬಳಿಕ ಅದನ್ನು ಬಾತ್ ರೂಮ್ ನಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. 2-3 ದಿನಗಳ ಕಾಲ ಆಹಾರವನ್ನು ನೀಡಿರಲಿಲ್ಲ ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ವಾತ್ಸಲ್ಯಪುರಂ ಜೈನ್ ಟ್ರಸ್ಟ್ ನಡೆಸುತ್ತಿರುವ ಈ ಅನಾಥಾಶ್ರಮವು ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯನ್ನು ಹೊಂದಿಲ್ಲ. ಟ್ರಸ್ಟ್ ಬೆಂಗಳೂರು,ಸೂರತ್,ಜೋಧಪುರ ಮತ್ತು ಕೋಲ್ಕತಾಗಳಲ್ಲಿಯೂ ಅನಾಥಾಶ್ರಮಗಳನ್ನು ಹೊಂದಿದೆ ಎಂದು ಪೋಲಿಸರು ತಿಳಿಸಿದರು.
ಅನಾಥಾಶ್ರಮಕ್ಕೆ ಬೀಗಮುದ್ರೆ ಹಾಕಲಾಗಿದ್ದು, ಮಕ್ಕಳನ್ನು ಸರಕಾರಿ ಆಶ್ರಯ ಧಾಮಗಳಿಗೆ ಸ್ಥಳಾಂತರಿಸಲಾಗಿದೆ.