Uttar Pradesh | ಬುರ್ಖಾ ಧರಿಸದೆ ಇದ್ದುದಕ್ಕಾಗಿ ವ್ಯಕ್ತಿಯಿಂದ ಪತ್ನಿ, ಇಬ್ಬರು ಪುತ್ರಿಯರ ಹತ್ಯೆ

ಆರೋಪಿ ಫಾರೂಕ್ | Photo Credit : NDTV
ಹೊಸದಿಲ್ಲಿ,ಡಿ.17: ತನ್ನ ಪತ್ನಿ ಬುರ್ಖಾ ಧರಿಸದೆ ಮನೆಯಿಂದ ಹೊರ ಹೋಗಿದ್ದಕ್ಕಾಗಿ ಕ್ರುದ್ಧಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಹಾಗೂ ಇಬ್ಬರು ಪುತ್ರಿಯನ್ನು ಕೊಲೆಗೈದು, ಅವರ ಮೃತದೇಹಗಳನ್ನು ಮನೆಯೊಳಗೆ ಹೂತುಹಾಕಿದ ಘೋರ ಘಟನೆ ಉತ್ತರಪ್ರದೇಶ ಶಾಮ್ಲಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಫಾರೂಕ್ ನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 10ರಂದು ಕಾಂದ್ಲಾ ಪೊಲೀಸ್ ವ್ಯಾಪ್ತಿಯ ಘಾರಿ ದೌಲತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ
ಪತಿಯೊಂದಿಗೆ ಕೌಟುಂಬಿಕ ವಿವಾದವುಂಟಾದ ಕಾರಣ ಫಾರೂ ಕ್ನ ಪತ್ನಿ ತಾಹಿರಾ ತವರು ಮನೆಗೆ ತೆರಳಿದ್ದಳು. ಆಗ ಆಕೆ ಬುರ್ಖಾ ಧರಿಸದೆ ಹೋಗಿದ್ದರಿಂದ ಫಾರೂಕ್ ರೋಷಗೊಂಡಿದ್ದ ಎನ್ನಲಾಗಿದೆ. ತಾಹಿರಾ ಮನೆಗೆ ಮರಳಿದಾಗ ಆತ ಈ ವಿಷಯವಾಗಿ ಆಕೆಯೊಂದಿಗೆ ವಾಗ್ವಾದ ನಡೆಸಿದ್ದು, ಕೋಪದಿಂದ ಪತ್ನಿಯನ್ನು ಹಾಗೂ ತನ್ನ ಇಬ್ಬರು ಪುತ್ರಿಯನ್ನು ಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೂವರ ಮೃತದೇಹಗಳನ್ನೂ ಆತ ಮನೆಯ ಒಳಗಡೆ ಹೂತುಹಾಕಿದ್ದನ್ನು ಪೊಲೀಸರು ಮಂಗಳವಾರ ಪತ್ತೆಹಚ್ಚಿದ್ದಾರೆ.
ತಾಹಿರಾ ಹಾಗೂ ಆಕೆಯ ಪುತ್ರಿಯರಾದ ಆಫ್ರಿನ್ ಹಾಗೂ ಸೆಹ್ರಿನ್ ಸುಮಾರು ಐದು ದಿನಗಳಿಂದ ನಾಪತ್ತೆಯಾಗಿದ್ದರಿಂದ ಸಂದೇಹಗೊಂಡ ಫಾರೂಕ್ ನ ತಂದೆಯೇ ಖುದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಪೊಲೀಸರು ಫಾರೂಕ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.







